ಶೆಟ್ಟರ್ ಬಜೆಟ್‌ಗೆ ಬಿಎಸ್‌ವೈ-ಶೋಭಾ ಏನಂತಾರೆ?

ಮುಖ್ಯವಾಗಿ ಕೆಜೆಪಿಯ ಎರಡು ಕಣ್ಣುಗಳಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರದ್ಲಾಂಜೆ ಅವರು ಅವಕಾಶ ಸಿಕ್ಕಿದಾಗಲೆಲ್ಲ ಶೆಟ್ಟರ್ ಬಜೆಟ್ ಬಗ್ಗೆ ಕುಟುಕುತ್ತಿದ್ದಾರೆ.
ನಿನ್ನೆ ಸೋಮವಾರ ಮಳವಳ್ಳಿಯಲ್ಲಿ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪನವರು 'ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸುವ ಬಜೆಟ್‌ಗೆ ಕವಡೆ ಕಿಮ್ಮತ್ತೂ ಇಲ್ಲ' ಎಂದು ವ್ಯಂಗ್ಯವಾಡಿದರು.
'ಸರ್ಕಾರದ ಭವಿಷ್ಯವಿರುವುದೇ ಇನ್ನು ಮೂರು ತಿಂಗಳು. ಬಜೆಟ್‌ನಲ್ಲಿ ಯಾವುದೇ ಯೋಜನೆ ಘೋಷಿಸಿದರೂ ಅದು ಕಾರ್ಯಗತವಾಗುವುದಿಲ್ಲ. ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು, ಜನರನ್ನು ಓಲೈಸಿಕೊಳ್ಳುವ ಏಕೈಕ ದೃಷ್ಟಿಯಿಂದ ಬಜೆಟ್ ಮಂಡಿಸಲಾಗುತ್ತಿದೆ. ಅದಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ' ಎಂದು ಸಾರಿದರು.
'ಈಗಿನ ಮುಖ್ಯಮಂತ್ರಿಗಳು ನಾನು ಜಾರಿಗೆ ತಂದ ಯೋಜನೆಗಳನ್ನು ಮುಂದುವರಿಸದೆ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಭಾಗ್ಯಲಕ್ಷ್ಮಿ ಸೇರಿದಂತೆ ನಾನು ಜಾರಿಗೆ ತಂದ ಅನೇಕ ಯೋಜನೆಗಳಿಗೆ ಹಣವನ್ನೇ ಬಿಡುಗಡೆ ಮಾಡದೆ ಅವುಗಳನ್ನು ಹಾದಿತಪ್ಪುವಂತೆ ಮಾಡಿದ್ದಾರೆ' ಎಂದು ಕಿಡಿಕಾರಿದರು.
ಠುಸ್ ಪಟಾಕಿ- ಶೋಭಾ ಮೇಡಂ:
ತುರುವೇಕೆರೆಯಲ್ಲಿ ಮಾತನಾಡಿದ ರಾಜ್ಯದ ಮಾಜಿ ಸಚಿವೆ ಶೋಭಾ ಕರದ್ಲಾಂಜೆ ಅವರು 'ಕಳೆದ ಭಾರಿ ಯಡಿಯೂರಪ್ಪನವರು ನೀಡಿದ ಬಜೆಟ್ಟೇ ಇನ್ನೂ ಅನುಷ್ಠಾನಗೊಂಡಿಲ್ಲ. ಹಾಗಾಗಿ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೀಡುವ ಬಜೆಟ್ ಠುಸ್ ಪಟಾಕಿಯಂತಾಗಲಿದೆ. ಇನ್ನೊಂದು ತಿಂಗಳಲ್ಲಿ ಚುನಾವಣೆ ನಿಗದಿಯಾಗಲಿದೆ. ಮುಖ್ಯಮಂತ್ರಿಗಳು ಮಂಡಿಸುವ ಬಜೆಟ್‌ಗೆ ಮುಂದೆ ಬರುವ ಸರ್ಕಾರವೇ ಅನುಮೋದನೆ ನೀಡಬೇಕಾಗುತ್ತದೆ' ಎಂದು ಶೋಭಾ ಎಚ್ಚರಿಸಿದರು.
'ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅವಶ್ಯಕತೆ ಇದೆ ಎಂಬ ಯಡಿಯೂರಪ್ಪ ವಾದವನ್ನು ಪುಷ್ಠೀಕರಿಸಿದ ಶೋಭಾ 'ಯಡಿಯೂರಪ್ಪ ಅವರು ಕೆಜೆಪಿ ಹುಟ್ಟು ಹಾಕಿದ್ದು, ಈ ಪಕ್ಷವನ್ನು ಅಧಿಕಾರಕ್ಕೆ ತಂದು ರಾಜ್ಯದ ಅಭಿವೃದ್ಧಿಗೆ ಸಹಕರಿಸಲು ಮತದಾರರು ಮುಂದಾಗಬೇಕು' ಎಂದು ಮನವಿ ಮಾಡಿದರು.
ಕಳೆದ ಉಪ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಡದೆ, ಈ ಭಾರಿ ಕೆಜೆಪಿ ಅಭ್ಯರ್ಥಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ಬಿಎಸ್ವೈ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿ. ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪನವರ ಪಕ್ಷ ಕೆಜೆಪಿಯನ್ನು ಅಧಿಕಾರಕ್ಕೆ ತಂದರೆ ಕೇಂದ್ರ ಸರ್ಕಾರವನ್ನು ಬಿಗಿ ಮುಷ್ಠಿಯಲ್ಲಿ ಹಿಡಿದುಕೊಂಡು ರಾಜ್ಯದ ಅಭಿವೃದ್ಧಿಯನ್ನು ಸುಲಭವಾಗಿ ಮಾಡಬಹುದು ಎಂದರು.
ನಾನಿಲ್ಲದೆ ವಿದ್ಯುತ್ ಇಲಾಖೆಗೆ Fuse ಹೋದಂತಿದೆ:
'ಸರಕಾರ ಅಕ್ಕಿ ಬೆಲೆಯನ್ನು ನಿಯಂತ್ರಣಕ್ಕೆ ತಾರದೇ ಇರುವುದರಿಂದ ಅದರ ಬೆಲೆ 50 ರೂ ದಾಟಿದೆ. ರಾಜ್ಯದ ಅಕ್ಕಿಯು ಶ್ರೀಮಂತರ ಗೋದಾಮಿನಲ್ಲಿದ್ದು, ಹೊರ ರಾಜ್ಯ ಹಾಗೂ ಹೊರ ರಾಷ್ಟ್ರಕ್ಕೆ ಮಾರಾಟವಾಗುತ್ತಿದೆ. ನಾನು ಇಂಧನ ಇಲಾಖೆಗೆ ರಾಜೀನಾಮೆ ಕೊಟ್ಟ ನಂತರ ವಿದ್ಯುತ್ ಇಲಾಖೆಯನ್ನು ನಿಯಂತ್ರಿಸಲಾಗದೆ ಅಸಾಹಯಕ ಸ್ಥಿತಿಯಲ್ಲಿ ಈ ಸರ್ಕಾರವಿದೆ' ಎಂದೂ ಶೋಭಾ ಮೇಡಂ ಕಟಕಿಯಾಡಿದರು.












Click it and Unblock the Notifications