ಮೈಸೂರಿನಲ್ಲೊಂದು 'ರಾಯಲ್' ದರೋಡೆ
ಮೈಸೂರು, ಫೆ.5: ಆಭರಣ ಖರೀದಿಸುವಂತೆ ಗ್ರಾಹಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಇಲ್ಲಿನ ತೋಣಚಿ ಕೊಪ್ಪಳ ಲೇಔಟ್ ನಲ್ಲಿರುವ ಆಭರಣ ಮಳಿಗೆಯನ್ನು ಹಾಡಹಗಲೇ ದೋಚಿರುವ ಘಟನೆ ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ(ಫೆ.5) ನಡೆದಿದೆ.
ಟಿ.ಕೆ ಬಡಾವಣೆಯಲ್ಲಿರುವ ರಾಯಲ್ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 20 ಲಕ್ಷ ರು ಮೌಲ್ಯದ ಚಿನ್ನಾಭರಣಗಳು ಕಳ್ಳರ ಪಾಲಾಗಿದೆ. ಆಭರಣ ಮಳಿಗೆ ಸಿಬ್ಬಂದಿಗಳನ್ನು ಗನ್ ಪಾಯಿಂಟ್ ನಲ್ಲಿ ಹಿಡಿದಿಟ್ಟುಕೊಂಡು ಬೇಕಾದಷ್ಟು ಚಿನ್ನಾಭರಣಗಳನ್ನು ದೋಚಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಮಂಗಳವಾರ (ಫೆ.5) ಬೆಳಗ್ಗೆ 10 ಗಂಟೆ ಸುಮಾರಿಗೆ ಮಳಿಗೆ ಸಿಬ್ಬಂದಿ ರಾಜು ಅಂಗಡಿ ಬಾಗಿಲು ತೆಗೆದಿದ್ದಾನೆ. ಸ್ವಲ್ಪ ಸಮಯದ ನಂತರ ಇಬ್ಬರು ವ್ಯಕ್ತಿಗಳು ಆಭರಣ ಖರೀದಿಸುವ ನೆಪದಲ್ಲಿ ಒಳಗೆ ನುಗ್ಗಿದ್ದಾರೆ. ಮೊದಲಿಗೆ ಗ್ರಾಹಕರಂತೆ ವರ್ತಿಸಿದ ಇಬ್ಬರು ವ್ಯಕ್ತಿಗಳು ನಂತರ ರಾಜುವನ್ನು ಬೆದರಿಸಿದ್ದಾರೆ.
ಇಬ್ಬರಲ್ಲಿ ಒಬ್ಬ ಗನ್ ತೆಗೆದು ರಾಜುವನ್ನು ಬೆದರಿಸಿದ್ದಾರೆ. ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬುವಂತೆ ಸೂಚಿಸಿದ್ದಾರೆ. ಅದರಂತೆ ಎಲ್ಲಾ ಆಭರಣಗಳನ್ನು ರಾಜು ಬ್ಯಾಗಿಗೆ ತುಂಬಿದ್ದಾನೆ. ನಂತರ ಇಬ್ಬರು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಅಂಗಡಿಯೊಳಗೆ ಇಬ್ಬರು ಬಂದಿದ್ದರೂ ಇನ್ನಿಬ್ಬರು ಹೊರಗಡೆ ಕಾವಲು ಕಾಯುತ್ತ ನಿಂತಿದ್ದರು. ಒಟ್ಟು ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದಾನೆ. ಘಟನೆ ನಡೆದ ಸಮಯದಲ್ಲಿ ಅಂಗಡಿಯ ಸಿಸಿಟಿವಿ ಕೆಮೆರಾ ಆಫ್ ಆಗಿತ್ತು ಎಂಬ ಅಂಶ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ.
ಆದರೆ, ಅಂಗಡಿ ಬಾಗಿಲು ತೆಗೆದು ಕೆಲ ನಿಮಿಷಗಳಷ್ಟೇ ಆಗಿತ್ತು. ಸಿಸಿಟಿವಿ ಕೆಮೆರಾ ಆನ್ ಮಾಡಿರಲಿಲ್ಲ ಎಂದು ರಾಜು ಹೇಳಿಕೆ ನೀಡಿದ್ದಾನೆ. ಅಂಗಡಿಯಲ್ಲಿ ಗಿರವಿ ಇಟ್ಟಿದ್ದ ಆಭರಣಗಳೆಲ್ಲ ಕಳ್ಳರ ಪಾಲಾಗಿದೆ. ಘಟನೆ ಬಗ್ಗೆ ತಿಳಿದ ಅಂಗಡಿ ಮಾಲೀಕ ಜಗದೀಶ್ ಕುಮಾರ್, ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಇನ್ಸ್ ಪೆಕ್ಟರ್ ಅಂಕಯ್ಯ, ಪೇದೆ ಯೋಗಾನರಸಿಂಹ, ಪ್ರಕಾಶ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಮಹಜರು ಮಾಡಿದ್ದಾರೆ. ನಿನ್ನೆ ರಾತ್ರಿ ಅಂಗಡಿ ಬಾಗಿಲು 11.30ಕ್ಕೆ ಮುಚ್ಚಲಾಗಿದ್ದು, ಸಿಸಿಟಿವಿ ಕೆಮರಾಗಳು ಆ ಸಮಯಕ್ಕೆ ಆಫ್ ಮಾಡಲಾಗಿತ್ತು. ನಂತರ ಆನ್ ಆಗಿಲ್ಲ ಎಂದು ತಿಳಿದು ಬಂದಿದೆ.
ಇನ್ನೊಂದು ಮೂಲಗಳ ಪ್ರಕಾರ ಅಂಗಡಿ ತೆಗೆಯುವ ಮುನ್ನವೇ ದುಷ್ಕರ್ಮಿಗಳು ಒಳ ಸೇರಿಕೊಂಡಿದ್ದರು. ಸಿಬ್ಬಂದಿ ರಾಜು ಒಳ ಬರುತ್ತಿದ್ದಂತೆ ಬೆದರಿಸಿ ಹಿಡಿದಿಟ್ಟುಕೊಂಡರು ಎನ್ನಲಾಗಿದೆ.ಸರಸ್ವತಿ ಪುರಂ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications