ಕಮಲ್ ಹಾಸನ್ ಪತ್ರಿಕಾಗೋಷ್ಠಿ : ಟಿಪ್ಪಣಿಗಳು
ಚೆನ್ನೈ, ಜ. 30 : "ನಾನು ಮುಸ್ಲಿಂರ ವಿರೋಧಿಯಲ್ಲ, ನನ್ನ ಚಿತ್ರ ಮುಸ್ಲಿಂ ವಿರೋಧಿಯಲ್ಲ, ಜಾತಿ ಹೆಸರಿನಲ್ಲಿ ಚಿತ್ರ ತೆಗೆದು ದೇಶ ವಿಭಜನೆ ಮಾಡಲು ಯತ್ನಿಸುತ್ತಿಲ್ಲ, ಈ ಚಿತ್ರಕ್ಕಾಗಿ ಮನೆಮಠ ಎಲ್ಲವನ್ನೂ ಧಾರೆ ಎರೆದಿದ್ದೇನೆ, ಆದರೂ ನನ್ನ ಚಿತ್ರವನ್ನು ಯಾಕೆ ನಿಷೇಧಿಸುತ್ತಿದ್ದಾರೋ ತಿಳಿಯುತ್ತಿಲ್ಲ."
ಹೀಗೆಂದು ಭಾವುಕರಾಗಿ ತಮ್ಮ ವೇದನೆಯನ್ನು ಭಾವುಕರಾಗಿ ತೋಡಿಕೊಂಡಿದ್ದು, ಭಾರತದ ಚಿತ್ರರಂಗ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ ಅವರು. ಚೆನ್ನೈನಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, 'ವಿಶ್ವರೂಪಂ' ಚಿತ್ರದ ನಿಷೇಧದಿಂದಾಗಿ ತಾವು ಅನುಭವಿಸುತ್ತಿರುವ ನೋವನ್ನು ಮಾಧ್ಯಮದೆದಿರು ತೋಡಿಕೊಂಡರು.
ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ವಿಶ್ವರೂಪಂ ಚಿತ್ರದ ಮೇಲೆ ನಿಷೇಧ ಹೇರಿದ್ದರೆ, ಅಚ್ಚರಿ ಎಂಬಂತೆ ಕೇಂದ್ರ ಸರಕಾರ ಕಮಲ್ ಹಾಸನ್ ಅವರ ನೆರವಿಗೆ ಬಂದಿದೆ. ಈ ಚಿತ್ರದಲ್ಲಿ ನಿಷೇಧ ಹೇರುವಂತಹ ಯಾವುದೇ ಅಂಶಗಳಿಲ್ಲ ಎಂದು ಕೇಂದ್ರ ಹೇಳಿದ್ದರೂ ತಮಿಳುನಾಡು ಸರಕಾರ ಹಠಮಾರಿ ಧೋರಣೆ ತಾಳಿದೆ. ಮದ್ರಾಸ್ ಹೈಕೋರ್ಟ್ ನಿಷೇಧವನ್ನು ತೆರವುಗೊಳಿಸಿದ್ದನ್ನು ಪ್ರಶ್ನಿಸುವುದಾಗಿ ಹೇಳಿ ಮತ್ತೆ ಕಮಲ್ ಅವರಿಗೆ ಕಂಟಕ ತಂದಿದೆ.
ಈ ನಡುವೆ, ಮದ್ರಾಸ್ ಹೈಕೋರ್ಟ್ ನಿಷೇಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ವಿಶ್ವರೂಪಂ ಚಿತ್ರ ಭಾರೀ ಭದ್ರತೆಯ ನಡುವೆ ತೆರೆಗೆ ಅಪ್ಪಳಿಸಿದೆ. ಆದರೆ, ತಮಿಳುನಾಡಿನಲ್ಲಿ ಸರಕಾರದ ಧೋರಣೆಯಿಂದಾಗಿ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದರಿಂದಾಗಿ ಮನನೊಂದಿರುವ, ಚಿತ್ರದ ನಿರ್ಮಾಪಕ ನಿರ್ದೇಶಕರೂ ಆಗಿರುವ ಕಮಲ್ ಹಾಸನ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯ ಟಿಪ್ಪಣಿಗಳು ಇಲ್ಲಿವೆ

ಚಿತ್ರಕ್ಕಾಗಿ ಮನೆಮಠ ಅಡ ಇಟ್ಟಿದ್ದೇನೆ
ಈ ಚಿತ್ರಕ್ಕಾಗಿ ಮನೆಮಠಗಳನ್ನು ಸಾಲಗಾರರಲ್ಲಿ ಅಡ ಇಟ್ಟಿದ್ದೇನೆ. ಚಿತ್ರ ಬಿಡುಗಡೆಯಾಗಲಿಲ್ಲ ಅಂದ್ರೆ ಮನೆಮಠ ಎಲ್ಲವನ್ನೂ ಕಳೆದುಕೊಳ್ಳುತ್ತೇನೆ. ಚಿತ್ರ ಬಿಡುಗಡೆ ತಡವಾಗಿದ್ದರಿಂದ ಈಗಾಗಲೆ ನನ್ನ ಮನೆಯನ್ನು ಕಳೆದುಕೊಂಡಿದ್ದೇನೆ.

ಇದು ಹೇಗೆ ಭಾರತೀಯ ಮುಸ್ಲಿಂರನ್ನು ಬಾಧಿಸುತ್ತದೆ?
ನನ್ನ ಚಿತ್ರ ಇಸ್ಲಾಂ ವಿರೋಧಿಯಲ್ಲ. ಜಾತಿ ಹೆಸರಿನಲ್ಲಿ ದೇಶ ವಿಭಜನೆ ಮಾಡಲು ನಾನು ಇಚ್ಛಿಸುವುದಿಲ್ಲ. ಇದು ಅಫಘಾನಿಸ್ತಾನದಲ್ಲಿ ನಡೆಯುವ ಕಥೆ. ಇದು ಹೇಗೆ ಭಾರತೀಯ ಮುಸ್ಲಿಂರನ್ನು ಬಾಧಿಸುತ್ತದೆ ಎಂಬುದೇ ತಿಳಿಯುತ್ತಿಲ್ಲ.

ಹಿಂದೆ ಹುಸೇನ್ ಮಾಡಿದ್ದರು, ಈಗ ಹಾಸನ್!
ನನ್ನನ್ನು ತಮಿಳುನಾಡಿನಿಂದ ಹೊರಹಾಕಲು ಯತ್ನಿಸಲಾಗುತ್ತಿದೆ. ನಾನು ಜಾತ್ಯತೀತ ರಾಷ್ಟ್ರಕ್ಕೆ ಅಲ್ಲದಿದ್ದರೂ, ತಮಿಳುನಾಡಿನಿಂದ ಹೊರಗೆ ಜಾತ್ಯತೀತ ರಾಜ್ಯಕ್ಕೆ ಹೋಗುತ್ತೇನೆ. ಮೊದಲು ಹುಸೇನ್ ಮಾಡಿದ್ದರು, ಈಗ ಹಾಸನ್ ಮಾಡುತ್ತಾನೆ.

ಕೆಟ್ಟ ರಾಜಕೀಯದ ದಾಳವಾಗಿದ್ದೇನೆ
ತಮಿಳುನಾಡಿನಲ್ಲಿ ಕೆಟ್ಟ ರಾಜಕೀಯದ ದಾಳವಾಗಿದ್ದೇನೆ. ಇದನ್ನು ವಿರೋಧಿಸುತ್ತಿರುವ ಜನರ ಬಗ್ಗೆ ನನಗೆ ಯಾವುದೇ ಸಿಟ್ಟಿಲ್ಲ. ನನಗೆ ಅನೇಕ ಮುಸ್ಲಿಂ ಸ್ನೇಹಿತರಿದ್ದಾರೆ. ಅವರೂ ಇದರಿಂದ ನೊಂದಿದ್ದಾರೆ.

ಸರಕಾರ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ
ಈ ವಿವಾದದ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿಲ್ಲ. ತಮಿಳುನಾಡು ಸರಕಾರ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ನಾನು ಬೇಡವಾಗಿರುವ ತಮಿಳುನಾಡಿನಿಂದ ಹೊರಹೋಗಲು ಇಚ್ಛಿಸುತ್ತೇನಾದರೂ ಇನ್ಮುಂದೆ ತಮಿಳು ಸಿನೆಮಾ ಮಾಡುವುದಿಲ್ಲ ಎಂದು ಹೇಳುವುದಿಲ್ಲ.

ನನಗಂತೂ ನಿಜಕ್ಕೂ ಸಾಕಾಗಿ ಹೋಗಿದೆ
ನಾನು ಯಾವುದೇ ಧರ್ಮವನ್ನು ನಿಂದಿಸಲು ಇಷ್ಟಪಡುವುದಿಲ್ಲ. ಯಾವುದೇ ಧರ್ಮದ ವಿರೋಧಿಯೂ ಅಲ್ಲ. ನನಗಂತೂ ನಿಜಕ್ಕೂ ಸಾಕಾಗಿ ಹೋಗಿದೆ. ನಾನೊಬ್ಬ ಕಲಾಕಾರ ಮಾತ್ರ. ನಾನು ಯಾವ ದೇವರನ್ನೂ ಬೆಂಬಲಿಸುವುದಿಲ್ಲ.

ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆಯಿದೆ
ಈ ಚಿತ್ರವನ್ನು ನನ್ನ ಅನೇಕ ಮುಸ್ಲಿಂ ಸ್ನೇಹಿತರಿಗೆ ತೋರಿಸಿದ್ದೇನೆ. ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆಯಿದೆ. ನ್ಯಾಯ ದೊರೆಯುತ್ತದೆಂಬ ವಿಶ್ವಾಸವಿದೆ. ತೀರ್ಪು ಏನೇ ಆಗಲಿ ನನ್ನ ಅಭಿಮಾನಿಗಳು ಮತ್ತು ಮುಸ್ಲಿಂ ಸ್ನೇಹಿತರು ಶಾಂತಿಯಿಂದ ವರ್ತಿಸುತ್ತಾರೆ ಎಂದು ನಂಬಿದ್ದೇನೆ.

ದೇಶದ ಐಕ್ಯತೆಯ ಮುಂದೆ ನನ್ನ ನಷ್ಟ ಏನು ಮಹಾ
ದೇಶದ ಭದ್ರತೆಯ ಮುಂದೆ, ದೇಶದ ಐಕ್ಯತೆಯ ಮುಂದೆ ಒಂದು ಚಿತ್ರ ಅಥವಾ ಒಬ್ಬ ಹಣ ಕಳೆದುಕೊಳ್ಳುವುದು ಮುಖ್ಯ ಅಲ್ಲವೇ ಅಲ್ಲ. ಯಸ್, ಖಂಡಿತ ಮುಖ್ಯವಲ್ಲ.












Click it and Unblock the Notifications