ವಂಚನೆ: ಚಿದು, ಶಿಂಧೆ ವಿರುದ್ಧ ಎಫ್ ಐಆರ್

ರಂಗಾ ರೆಡ್ಡಿ ಜಿಲ್ಲಾ ನ್ಯಾಯಾಲಯ ಈ ಇಬ್ಬರು ಪ್ರಮುಖ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕುವಂತೆ ಲಾಲ್ ಬಹೂದ್ದರ್ ನಗರ ಪೊಲೀಸರಿಗೆ ಸೂಚಿಸಿದೆ. ಈ ಇಬ್ಬರು ಸಚಿವರು ತೆಲಂಗಾಣ ರಾಜ್ಯ ಸ್ಥಾಪನೆ ಬಗ್ಗೆ ಆಶ್ವಾಸನೆ ನೀಡಿ ಈಡೇರಿಸದೆ ಜನರಿಗೆ ವಂಚಿಸಿದ್ದಾರೆ. ಹೀಗಾಗಿ ಶಿಕ್ಷಾರ್ಹರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
'ಇನ್ನು ಒಂದು ತಿಂಗಳಿನಲ್ಲಿ ತೆಲಂಗಾಣ ರಾಜ್ಯ ಸ್ಥಾಪಿಸಲಾಗುವುದು' ಎಂದು ಡಿಸೆಂಬರ್ 2012ರಲ್ಲಿ ಹೇಳಿಕೆ ನೀಡಿದ್ದರು. ಆದರೆ, ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಆಂಧ್ರಪ್ರದೇಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷ ಭಾರಿ ಮುಜುಗರ ಅನುಭವಿಸಿದೆ. ರಾಷ್ಟ್ರ ನಾಯಕರ ಅನಗತ್ಯ ಹೇಳಿಕೆಗಳು, ಈಡೇರದ ಆಶ್ವಾಸನೆಗಳಿಂದ ಜನ ಬೇಸತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೇಶವ್ ರಾವ್ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಇಂದಿರಾ ಪಾರ್ಕಿನಲ್ಲಿ ತೆಲಂಗಾಣ ರಾಜ್ಯ ಸ್ಥಾಪನೆಗೆ ಆಗ್ರಹಿಸಿ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ತೆಲಂಗಾಣ ಮೂಲದ ಶಾಸಕ ಹಾಗೂ ಸಂಸದರ ರಾಜೀನಾಮೆಗೆ ತೆಲಂಗಾಣ ರಾಷ್ಟ್ರ ಸಮಿತಿ(TRS) ಆಗ್ರಹಿಸಿದೆ.
ಭಾನುವಾರ ಕಾಂಗ್ರೆಸ್ ಸಂಸದರಾದ ಪೊನ್ನಂ ಪ್ರಭಾಕರ್ ಹಾಗೂ ಜಿ ವಿನೋದ್ ಆವರನ್ನು ಘೇರಾವ್ ಮಾಡಿದ ಕಾರ್ಯಕರ್ತರು ತಮ್ಮ ಸಮರದೀಕ್ಷೆ ಬಗ್ಗೆ ಹೇಳಿದ್ದರು. ಉಸ್ಮಾನಿಯಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಕೂಡಾ ತೆಲಂಗಾಣ ಪರ ಹೋರಾಟಕ್ಕೆ ಧುಮುಕಿದ್ದಾರೆ. ಮಂಗಳವಾರ(ಜ.29) ತೆಲಂಗಾಣ ಪ್ರದೇಶದ ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ಕರ್ನಾಟಕ ಗಡಿ ಭಾಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications