ಮಂಗಳೂರು: ಆರೆಸ್ಸೆಸ್ ಮಹಾ ಸಾಂಘಿಕ್ ಗೆ ಭಾಗವತ್

ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿ, ಫೆ. 3 ರಂದು 'ಮಹಾ ಸಾಂಘಿಕ್' ಕಾರ್ಯಕ್ರಮ ರೂಪಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್‌ಜೀ ಭಾಗವತರವರು 'ಸಾಂಘಿಕ್'ನಲ್ಲಿ ಪಾಲ್ಗೊಳ್ಳುತ್ತಿರುವುದು ಉತ್ಸಾಹದ ಸಿದ್ಧತೆ ಇಮ್ಮಡಿಗೊಳಿಸಿದೆ.
ಆರೆಸ್ಸೆಸ್ ಬಗ್ಗೆ: ಭಾರತೀಯ ಜನಮಾನಸದಲ್ಲಿ ದೇಶಭಕ್ತಿ, ಸ್ವಾಭಿಮಾನದ ಜಾಗೃತಿಗಾಗಿ ಸಂಘಟಿತ ಪ್ರಯತ್ನವಾಗಿ ಆರಂಭವಾದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. 1925ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಆರಂಭವಾದ ಸಂಘದ ಕಾರ್ಯಚಟುವಟಿಕೆ 1940ರ ದಶಕದಲ್ಲೇ ಮಂಗಳೂರು ಪ್ರದೇಶವನ್ನು ಪ್ರವೇಶಿಸಿತ್ತು.
8 ದಶಕಗಳ ನಿರಂತರ ಪರಿಶ್ರಮದ ತಪಸ್ಸಿನ ಫಲವಾಗಿ ಮಂಗಳೂರು, ಉಡುಪಿ, ಪುತ್ತೂರು, ಕಾಸರಗೋಡು, ಕೊಡಗು ಪ್ರದೇಶದಲ್ಲಿ ಸಂಘಶಕ್ತಿ ಅಸಾಧಾರಣವೆಂಬಂತೆ ಹೊರಹೊಮ್ಮಿದೆ. ಬೈಂದೂರಿನ ಶಿರೂರು ಹೊಳೆಯಿಂದ ಕುಶಾಲನಗರದ ಕಾವೇರಿ ತಟದವರೆಗೆ ಹಬ್ಬಿರುವ ಸಂಘದ ಈ ಮಂಗಳೂರು ವಿಭಾಗದಲ್ಲಿನ ಶೇ. 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಘದ ಕಾರ್ಯಚಟುವಟಿಕೆಯಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಮಂಜೇಶ್ವರ, ಮೂಡಬಿದ್ರೆ, ಬ್ರಹ್ಮಾವರ, ಮಂಗಳೂರು ಗ್ರಾಮಾಂತರ, ಮುಲ್ಕಿ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಸಂಘದ ಕಾರ್ಯ ಚಟುವಟಿಕೆ ಎಲ್ಲ ಗ್ರಾಮಗಳಿಗೆ ಹಬ್ಬಿದೆ.
ಪಶ್ಚಿಮ ಪಟ್ಟದ ತಪ್ಪಲಿನಲ್ಲಿರುವ ಬಾಂಜಾರು, ಎಳನೀರು, ಕೋಲೋಡಿ, ಈದು, ಹಳ್ಳಿಹೊಳೆಯಂತಹ ವನವಾಸಿ ಹಾಡಿಗಳಲ್ಲೂ ಸಂಘದ 'ನಮಸ್ತೇ ಸದಾ ವತ್ಸಲೇ...' ಪ್ರಾರ್ಥನೆ ಅನುರಣಿಸುತ್ತಿದೆ.
ಸಂಘಟಿತ ಸಮಾಜ ಕಟ್ಟುವುದರೊಂದಿಗೆ 2೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಲವು ರೀತಿಯ ಸಮಾಜಮುಖಿ ಚಟುವಟಿಕೆಗಳಿವೆ. ಸಂಪೂರ್ಣ ಜಲಸಾಕ್ಷರ ಗ್ರಾಮದ ಖ್ಯಾತಿಯ ಇಡ್ಕಿದು ಸೇರಿದಂತೆ ಕನ್ಯಾಡಿ, ಪಾಲ್ತಾಡಿ, ಗೋಳ್ತಮಜಲು, ನೇರಳಕಟ್ಟೆ ಇತ್ಯಾದಿ ಗ್ರಾಮಗಳು ಗ್ರಾಮವಿಕಾಸದ ಮುಂಚೂಣಿಯಲ್ಲಿವೆ. ಶಿಕ್ಷಣ, ಸೇವೆ, ಸಹಕಾರ, ಧಾರ್ಮಿಕ, ರಾಜಕೀಯ ರಂಗಗಳಲ್ಲಿ ಸಂಘದ ಸ್ವಯಂಸೇವಕರು ಮಂಚೂಣಿಯಲ್ಲಿದ್ದು ಕಾರ್ಯನಿರತರಾಗಿದ್ದಾರೆ.
ಯಾವುದೇ ಕರಪತ್ರ, ಬ್ಯಾನರ್, ಪೋಸ್ಟರ್‌ಗಳ ಮುದ್ರಣವಿಲ್ಲದೆ ಮನೆ, ಮನೆಯ ಭೇಟಿಯ ಮೂಲಕ ಈ ಬೃಹತ್ ಸಾಂಘಿಕ್ ರೂಪಗೊಳ್ಳುತ್ತಿದೆ. ಸಾಂಘಿಕ್‌ನಲ್ಲಿ ಪಾಲ್ಗೊಳ್ಳುವ ಸ್ವಯಂಸೇವಕರು ತಮ್ಮದೇ ವೆಚ್ಚದಲ್ಲಿ 'ಗಣ ವೇಷ' ಎಂದೇ ಪರಿಚಿತವಾಗಿರುವ ಸಂಘದ ಸಮವಸ್ತ್ರ ಹೊಂದಿರಬೇಕು.
ಈಗಾಗಲೇ ಬೈಂದೂರಿನಿಂದ ಕುಶಾಲನಗರದವರೆಗಿನ ಮಂಗಳೂರು ವಿಭಾಗದ ಎಲ್ಲ 1152 ಗ್ರಾಮಗಳನ್ನು ಸಂಘದ ಕಾರ್ಯಕರ್ತರು ತಲುಪಿದ್ದಾರೆ. ನೂರಾರು ಗ್ರಾಮಗಳಲ್ಲಿ ಪ್ರತಿ ಮನೆಯಿಂದಲೂ ಸ್ವಯಂಸೇವಕರು ಸಿದ್ಧಗೊಳ್ಳುತ್ತಿರುವುದು ವಿಶೇಷವೆನಿಸಿದೆ.
ಫೆ. 3ರ ಸಾಂಘಿಕ್ ಮಂಗಳೂರು ಸಮೀಪದ ಬಜ್ಪೆ ವಿಮಾನ ನಿಲ್ದಾಣದ ಮುಂಭಾಗ ಕೆಂಜಾರಿನ 65 ಎಕರೆ ಪ್ರದೇಶದಲ್ಲಿ ಮಧ್ಯಾಹ್ನ 3ಕ್ಕೆ ಸಮಾವೇಶಗೊಳ್ಳಲಿದೆ. ಮೈದಾನವನ್ನು ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡಿದ್ದು ಉಳಿದ ಸಿದ್ಧತೆಗಳು ಭರದಿಂದ ಸಾಗಿವೆ.
ಫೆ. 3 ರಂದು ಉಡುಪಿ, ಮಂಗಳೂರು, ಕಾಸರಗೋಡು, ಪುತ್ತೂರು, ಕೊಡಗು ಪ್ರದೇಶಗಳಿಂದ ಪ್ರವಾಹದಂತೆ ಹರಿದು ಬರಲಿರುವ ಸ್ವಯಂಸೇವಕರಿಗೆ ಹೊರವಲಯದಲ್ಲಿ ಪ್ರತ್ಯೇಕ ಭೋಜನ ಶಾಲೆ, ವಾಹನ ನಿಲುಗಡೆ ಸೇರಿದಂತೆ ಇಡೀ ಕಾರ್ಯಕ್ರಮದ ವಿವರವಾದ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಈ ವಿಭಾಗದ ಸಂಘಚಾಲಕ ಡಾ| ವಾಮನ ಶೆಣೈ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಡಾ| ವಾಮನ ಶೆಣೈ : 94805 82027 / 98806 21824 .












Click it and Unblock the Notifications