ಬಹುಮತ ಇದ್ರೆ ಸಾಬೀತು ಮಾಡ್ರಿ ಯಾಕ್ರಿ ಹೆದ್ರಿಕೆ?

ಫೆ.4ರಂದು ಆರಂಭವಾಗಲಿರುವ ಜಂಟಿ ಅಧಿವೇಶನಕ್ಕೂ ಮುನ್ನ ಈ ಬಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಲ್ಲಿ ಚರ್ಚಿಸಲು ಕೆಪಿಸಿಸಿ ನಿರ್ಧರಿಸಿದೆ. ಇದುವರೆವಿಗೂ ಕೇವಲ ಇಬ್ಬರ ರಾಜೀನಾಮೆ ಮಾತ್ರ ಅಂಗೀಕಾರವಾಗಿದೆ. ರಾಜೀನಾಮೆ ನಾಟಕ ನಿಲ್ಲಿಸಿ, ಬಹುಮತ ಸಾಬೀತು ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಪೀಕರ್ ಬೋಪಯ್ಯ ಅವರು ಕೂಡಲೇ ಬೆಂಗಳೂರಿಗೆ ಆಗಮಿಸಿ 13 ಮಂದಿ ಶಾಸಕರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಬೇಕು. ಶೆಟ್ಟರ್ ಅವರು ಕೂಡಲೇ ವಿಧಾನಸಭೆ ಅಧಿವೇಶನ ಕರೆದು ವಿಶ್ವಾಸ ಮತ ಯಾಚಿಸಬೇಕು. ಅಲ್ಲಿ ತನಕ ಬಜೆಟ್ ಮಂಡಿಸಬಾರದು ಎಂದು ಸಿದ್ದರಾಮಯ್ಯ ಹೇಳಿದರು.
ಕೇವಲ 13 ಮಂದಿ ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತು. ಸರ್ಕಾರ ಉರುಳಿಸಬೇಕೆಂಬ ಇಚ್ಚೆಯಿದ್ದರೆ ಕೂಡಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿ ತಮ್ಮ ಬೆಂಬಲಿಗ ಶಾಸಕರ ಸಹಿಯುಳ್ಳ ಪತ್ರವನ್ನು ಸಲ್ಲಿಸುತ್ತಿದ್ದರು.
ಈ ಪತ್ರದ ಆಧಾರದ ಮೇಲೆ ರಾಜ್ಯಪಾಲರು ಸಂವಿಧಾನ ಬದಟಛಿವಾದ ಅಧಿಕಾರ ಚಲಾಯಿಸುವುದಕ್ಕೆ ಅವಕಾಶ ಸಿಕ್ಕಿದಂತಾಗುತ್ತಿತ್ತು. ವಿಧಾನಸಭೆಯ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿಗೆ ಆದೇಶಿಸಲು ಅನುಕೂಲವಾಗುತ್ತಿತ್ತು. ಆದರೆ, ಯಡಿಯೂರಪ್ಪ ಅವರು ಕೂಡಾ ಚೆನ್ನಾಗಿ ನಾಟಕವಾಡುತ್ತಿದ್ದಾರೆ.
ರಾಜ್ಯಪಾಲರೇ ಸುಮೋಟೋ ಅಧಿಕಾರ ಚಲಾಯಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಸರ್ಕಾರದ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇದೇ ಸ್ಪೀಕರ್ ಬೋಪಯ್ಯ ಅವರನ್ನು ದುರುಪಯೋಗ ಪಡಿಸಿಕೊಂಡು ತಮ್ಮ ವಿರುದ್ಧ ಬಂಡಾಯ ಎದ್ದಿದ್ದ 15 ಮಂದಿ ಶಾಸಕರ ಶಾಸಕತ್ವವನ್ನು ಅಮಾನತುಗೊಳಿಸಿದ್ದರು.
ಈಗ ಅದೇ ತಂತ್ರಗಾರಿಕೆಯನ್ನು ಶೆಟ್ಟರ್ ಪ್ರಯೋಗಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಅವರದ್ದೆ ತಂತ್ರಗಾರಿಕೆ ತಿರುಗು ಬಾಣವಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ವಿಧಾನಸಭೆಯ ಇತಿಹಾಸದಲ್ಲಿ ಸ್ಪೀಕರ್ ಅಧಿಕಾರ ಹಾಗೂ ಕಚೇರಿಯನ್ನು ಇಷ್ಟರ ಮಟ್ಟಿಗೆ ಯಾರೂ ದುರುಪಯೋಗ ಪಡಿಸಿಕೊಂಡಿರಲಿಲ್ಲ. 15 ಮಂದಿ ಶಾಸಕರ ಶಾಸಕತ್ವ ಅಮಾನತುಗೊಳಿಸಿ, ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ತೀವ್ರ ಟೀಕೆಗೆ ಒಳಗಾಗಿದ್ದರೂ, ಇನ್ನು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸರ್ಕಾರದ ಕೈಗೊಂಬೆಯಾಗಿ
ವರ್ತಿಸುತ್ತಿರುವುದು ದುರಂತ ಎಂದರು.
ಬಿಎಸ್ ವೈಗೆ ಸವಾಲ್ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಧೈರ್ಯವಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ.
ಅವರು, ಯಡಿಯೂರಪ್ಪ ವರುಣಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಮಾತನಾಡಿದ್ದಾರೆ. ತಮ್ಮ ಆಪ್ತ ಸಹಾಯಕ ಕಾ.ಪು .ಸಿದ್ದಲಿಂಗಸ್ವಾಮಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾರಣ ಅವರ ಗೆಲುವು ಖಚಿತ. ಸಿದ್ದರಾಮಯ್ಯ ಬೇರೆ ಕ್ಷೇತ್ರ ಹುಡುಕಿಕೊಳ್ಳಲಿ ಎಂದು ಹೇಳಿದ್ದಾರೆ. ವರುಣಾ ಕ್ಷೇತ್ರದಲ್ಲಿಯೇ ನನ್ನ ವಿರುದ್ಧ ಯಡಿಯೂರಪ್ಪ ಸ್ಪಧಿಸಲಿ. ನನಗೂ ಅವರೊಂದಿಗೆ ಸ್ಪರ್ಧಿಸುವ ಇಚ್ಚೆ ಇದೆ ಎಂದು ಸವಾಲು ಹಾಕಿದರು.












Click it and Unblock the Notifications