ಅತ್ಯಾಚಾರದ ಕಥೆ ಕಟ್ಟಿದ ಮಹಿಳೆಯ ಬಂಧನ

ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆ ಮಹಿಳೆ ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆದ ಕಥೆ ಹೆಣೆದಿದ್ದಳು. ತನಿಖೆಯ ಸಂಯದಲ್ಲಿ ಇದು ಸುಳ್ಳು ಕಥೆ ಎಂದು ತಿಳಿದ ಮೇಲೆ ಆಕೆಯನ್ನು ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತನ್ನನ್ನು ಚಂಡಿಗಢದ ಸೆಕ್ಟರ್ 17 ಅಂತಾರಾಜ್ಯ ಬಸ್ ನಿಲ್ದಾಣದಲ್ಲಿ ಜ.18ರಂದು ರಾತ್ರಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಅಪಹರಿಸಿದ್ದರು. ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಚಲಿಸುತ್ತಿದ್ದ ಕಾರಿನಿಂದ ಶನಿವಾರ ಹೊರಕ್ಕೆ ಎಸೆಯಲಾಗಿತ್ತು ಎಂದು ಮೊಗಾ ಜಿಲ್ಲೆಯ ಆ ಮಹಿಳೆ ದೂರಿದ್ದಳು.
ಆಕೆಯನ್ನು ಬಂಧಿಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಪ್ರಕರಣದ ಕಥೆಯನ್ನು ಬಿಚ್ಚಿಟ್ಟ ಭತಿಂಡಾ ಇನ್‌ಸ್ಪೆಕ್ಟರ್ ಜನರಲ್ ನಿರ್ಮಲ್ ಸಿಂಗ್ ದಿಲ್ಲನ್ ಅವರು, "ಸುನೀಲ್ ಕುಮಾರ್ ಎಂಬಾತನ ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಗುರವೀರ್ ಈ ಕಥೆ ಕಟ್ಟಿದ್ದಾಳೆ. ಸುನೀಲ್ ಕುಮಾರ್ ಹೆಂಡತಿ ಗುರವೀರ್ ವಿರುದ್ಧ ಕೊಲೆಗೆ ಯತ್ನ ನಡೆಸಿದ ಮೊಕದ್ದಮೆಯನ್ನು ಹೂಡಿದ್ದಳು. ಇದಕ್ಕೆ ಪ್ರತಿಯಾಗಿ ಗುರವೀರ್ ಅತ್ಯಾಚಾರದ ಕಥೆ ಹೆಣೆದಿದ್ದಳು" ಎಂದು ವಿವರಿಸಿದರು.
ಈ ಪ್ರಕರಣ ಇನ್ನೂ ರೋಚಕ ಕಥಾನಕಗಳನ್ನು ಹೊರಹಾಕಿದೆ. ಸುನೀಲ್ ಕುಮಾರ್ ಜೊತೆ ಗುರವೀರ್ ಮೊದಲು ಸಂಬಂಧ ಹೊಂದಿದ್ದಳು. ಆದರೆ, ಸುನೀಲ್ ಮದುವೆ ಕಾಂತಾ ಜೊತೆ ನಡೆದಿತ್ತು. ಸುನೀಲ್ ಕುಮಾರ್ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆ ಆಗಿಲ್ಲ.
ತನ್ನ ಮೇಲೆ ಕಾಂತಾ ಮತ್ತು ಆಕೆಯ ತಾಯಿಯ ಸಹಾಯದಿಂದ ಆಕೆಯ ಮಾವ ಅಮೀರ್ ಚಂದ್ ಮತ್ತು ಅಣ್ಣ ವಿಜಯ್ ಕುಮಾರ್ ಎಂಬಿಬ್ಬರು ಅತ್ಯಾಚಾರವೆಸಗಿದ್ದರು ಎಂದು ಗುರವೀರ್ ಆರೋಪಿಸಿದ್ದಳು. ಕಾಂತಾ ಮತ್ತು ಆಕೆಯ ಗಂಡನ ಮೇಲೆ ಸೇಡಿಗಾಗಿ ತಹತಹಿಸುತ್ತಿದ್ದ ಗುರವೀರ್ ತಾನು ಬೀಸಿದ ಜಾಲದಲ್ಲಿ ಈಗ ತಾನೇ ಸಿಲುಕಿಕೊಂಡಿದ್ದಾಳೆ.
ದೇಶದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕಠಿಣ ಕಾನೂನನ್ನು ಜಾರಿಗೊಳಿಸಬೇಕು ಎಂದು ಭಾರೀ ಕೂಗು ಎದ್ದಿದೆ. ಮಹಿಳೆಯರ ಪರವಾಗಿ ಹೋರಾಟಗಳು ನಡೆಯುತ್ತಿವೆ. ಇದರ ಲಾಭ ಪಡೆಯುವ ಉದ್ದೇಶದಿಂದ ಗುರವೀರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕಥೆ ಕಟ್ಟಿದ್ದಳು.












Click it and Unblock the Notifications