ಹಾದಿ ರಂಪ ಬೀದಿ ರಂಪದಲ್ಲಿ ಕ್ರಿಕೆಟರ್ ವೆಂಕಿ

ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿ ತಡರಾತ್ರಿ ನಡೆದ ಈ ಗಲಾಟೆ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆ ಪ್ರವೇಶಿಸಿದೆ. ಇಬ್ಬರು ಪರಸ್ಪರ ದೂರು ದಾಖಲಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ರಸ್ತೆಗೆ ವಾಹನ ಅಡ್ಡ ನಿಲ್ಲಿಸಿದ್ದಕ್ಕೆ ವೆಂಕಟೇಶ್ ಪ್ರಸಾದ್ ಅವರ ಪತ್ನಿ ಜಯಂತಿ ಹಾಗೂ ಸ್ಥಳೀಯ ನಿವಾಸಿ ಇಂದಿರಾ ಶಾಸ್ತ್ರಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಮಾಜಿ ಶಾಸಕ ಶಿವರಾಮೇಗೌಡರ ಕಡೆಯವರು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದರು ಹಾಗೂ ರಸ್ತೆಗೆ ಅಡ್ಡ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುತ್ತಿದ್ದರು ಎಂದು ವೆಂಕಿ ಪತ್ನಿ ಜಯಂತಿ ತಗಾದೆ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ವೆಂಕಟೇಶ್ ಪ್ರಸಾದ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
'ತಾಳ್ಮೆಯಿಂದ ಇರಿ ಸಾರ್' ಎಂದು ಗೌಡರ ಕಡೆ ಹುಡುಗರು ಕೇಳಿ ಕೊಂಡರೂ ವೆಂಕಟೇಶ್ ಪ್ರಸಾದ್ ಅವರು ಮತ್ತೆ ಮತ್ತೆ ಹಾರ್ನ್ ಮಾಡುತ್ತಲೇ ಇದ್ದರು ಎನ್ನಲಾಗಿದೆ. ನಂತರ ಕಾರಿನಿಂದ ಇಳಿದ ವೆಂಕಟೇಶ್ ಪ್ರಸಾದ್ ಅವರು ಜಗಳಕ್ಕೆ ಇಳಿದಿದ್ದಾರೆ. ಈ ಸಮಯದಲ್ಲಿ ಇಂದಿರಾಶಾಸ್ತ್ರಿ ಅವರು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇತ್ತ ಗೌಡರ ಮಗಳು ಭವ್ಯ ಅವರು ವೆಂಕಟೇಶ್ ಪ್ರಸಾದ್, ಜಯಂತಿ ಹಾಗೂ ಇಂದಿರಾ ವಿರುದ್ಧ ದೂರು ನೀಡಿದ್ದಾರೆ. ಕೊನೆಗೆ ಎರಡು ಕಡೆಯವರನ್ನು ಕರೆದು ಸಂಧಾನ ಮಾಡಿಸುವಲ್ಲಿ ಇಂದಿರಾನಗರ ಪೊಲೀಸರು ಯಶಸ್ವಿಯಾಗಿದ್ದು, ಸೋಮವಾರ ಎರಡೂ ಕಡೆಯವರು ದೂರು ವಾಪಸ್ ತೆಗೆದುಕೊಂಡಿದ್ದಾರೆ.
ಗಲಾಟೆ ನಡೆದ ಸಮಯಕ್ಕೆ ತೆರಳಿದ ಪೊಲೀಸರು ವಿಡಿಯೋ ಚಿತ್ರೀಕರಣ ನಡೆಸಿದ್ದು, ತನಿಖೆಗೆ ಸಹಾಯಕವಾಗಲಿದೆ. ಎರಡೂ ಕಡೆಯವರು ಪರಸ್ಪರ ತಮ್ಮ ತಪ್ಪನ್ನು ಅರಿತಿದ್ದಾರೆ ಎಂದು ಹೆಚ್ಚುವರಿ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಟಿ ಸುಶೀಲ್ ಕುಮಾರ್ ಅವರು ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ, ಹಾಲಿ ಆರ್ ಸಿಬಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಪತ್ನಿ ಜಯಂತಿ ಅವರು ಪೊಲೀಸರ ಜೊತೆ ವಾಗ್ಯುದ್ಧ ನಡೆಸಿದ ಘಟನೆ 2012ರ ಮೇ ತಿಂಗಳಿನಲ್ಲಿ ನಡೆದಿತ್ತು. ಕರ್ತವ್ಯ ನಿರತ ಪೊಲೀಸರ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದು, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮುಂತಾದ ಆರೋಪಗಳನ್ನು ವೆಂಕಟೇಶ್ ಪ್ರಸಾದ್ ಅವರ ಪತ್ನಿ ಜಯಂತಿ ಅವರ ಮೇಲೆ ಹೊರೆಸಲಾಗಿತ್ತು.











Click it and Unblock the Notifications