ಟಿಪ್ಪು ವಿಶ್ವ ವಿದ್ಯಾಲಯಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪರಸ್ಪರ ಕಿತ್ತಾಟ ಮಾಡಿಕೊಂಡು ಟಿಪ್ಪು ವಿವಿ ಸ್ಥಾಪನೆ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರಂತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ(ಜ.20) ಹೇಳಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟಿಪ್ಪು ವಿವಿ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಲು ಜೆಡಿಎಸ್ ಅಲ್ಪಸಂಖ್ಯಾತ ಘಟಕ ಕನಕಪುರ ತಾಲೂಕು ಅಧ್ಯಕ್ಷ ಮುಜೀಬುಲ್ಲ ಅವರ ನಿವಾಸದಲ್ಲಿ ನಡೆದ ಸಭೆ ನಂತರ ಸಿಂಧ್ಯಾ ಮಾತನಾಡಿದರು.
ಕೇಂದ್ರ ಸರ್ಕಾರ ಟಿಪ್ಪು ವಿವಿ ಸ್ಥಾಪಿಸುವ ಕುರಿತು ನೀಡಿರುವ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಬಾರದು ಟಿಪ್ಪು ಸುಲ್ತಾನ್ ಹಿಂದೂ ದೇವರುಗಳ ಬಗ್ಗೆ ಅಪಾರ ಗೌರವ, ನಂಬಿಕೆ ಹೊಂದಿದ್ದ ವ್ಯಕ್ತಿ ಎನ್ನುವುದಕ್ಕೆ ನಂಜನಗೂಡು, ಶೃಂಗೇರಿ, ಶ್ರೀರಂಗಪಟ್ಟಣದಲ್ಲಿರುವ ದೇವಾಲಯಗಳೇ ಸಾಕ್ಷಿ. ಸ್ವಾತಂತ್ರ್ಯ ಹೋರಾಟದಲ್ಲಿ ಶಿವಾಜಿಯಂತೆ ಟಿಪ್ಪು ಕೂಡಾ ಹೋರಾಟ ನಡೆಸಿದ್ದನ್ನು ಎನ್ನುವುದಕ್ಕೆ ನೆಪೋಲಿಯನ್ ಟಿಪ್ಪುವಿನ ಬಗ್ಗೆ ಬರೆದ ಪತ್ರದಲ್ಲಿ ಉಲ್ಲೇಖ ಇದೆ ಎಂದು ಸಿಂಧ್ಯಾ ಹೇಳಿದರು.
ಸ್ವಾತಂತ್ರ್ಯ ಬಂದ ದಿನದಿಂದ ಅಲ್ಪಸಂಖ್ಯಾತರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಮೇಲೆತ್ತುವಲ್ಲಿ ಕೇಂದ್ರ ಸರಕಾರ ಶ್ರಮ ಶೂನ್ಯವಾಗಿತ್ತು. ಆದರೆ ಇದೀಗ ಟಿಪ್ಪು ವಿವಿ ರಾಜ್ಯದಲ್ಲಿ ಸ್ಥಾಪನೆಯಾದರೆ ಅದೆಲ್ಲವೂ ಅಳಿಸಿ ಹೋಗಲಿದೆ ಎಂದರು.
ಇನ್ನೂ ಟಿಪ್ಪು ವಿವಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಮಧುಸೂದನ್ ಅವರ ಬಗ್ಗೆ ಮಾತನಾಡಿದ ಪಿಜಿಆರ್ ಸಿಂಧ್ಯಾ, ಇತಿಹಾಸದ ಗಂಧವೇ ಗೊತ್ತಿಲ್ಲದ ಅವರ ಹೇಳಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಮನ ನೀಡಬಾರದು ಎಂದರು.
ಟಿಪ್ಪು ಬಗ್ಗೆ ಹತ್ತಾರು ಕೃತಿಗಳು ಕನ್ನಡದಲ್ಲಿಯೇ ಬಿಡುಗಡೆಗೊಂಡಿವೆ. ಆ ಪುಸ್ತಕಗಳನ್ನು ತೆರೆದು ಗೋ.ಮಧುಸೂದನ್ ಅವರು ಓದಿ ತಿಳಿದುಕೊಳ್ಳಲಿ ಎಂದು ಹೇಳಿದರು. ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಫೀ ಅಹಮ್ಮದ್, ಅಬ್ಬುಲ್‌ವಾಜೀಜ್, ಮುಜೀಬುಲ್ಲ, ಸರದಾರ್‌ಖಾನ್, ಸಿದ್ದಮರೀಗೌಡ, ಬಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಉದ್ದೇಶಿತ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆಗೆ ಬಿಜೆಪಿ ಸರ್ಕಾರ ಯಾವುದೇ ಸಹಕಾರ ನೀಡುವುದಿಲ್ಲ. ಭೂಮಿ ಮಂಜೂರಾಗುವುದಿಲ್ಲ. ಟಿಪ್ಪು ವಿವಿ ಸ್ಥಾಪಿಸಿದರೆ ಉಗ್ರಗಾಮಿಗಳ ಕೇಂದ್ರವಾಗಲಿದೆ. ಈಗಾಗಲೇ ಆಲಿಗಢ ಉಗ್ರರ ತಾಣವಾಗಿದೆ ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications