ಹುಷಾರು, ಬೆಂ. ಮಹಿಳಾ ಟೆಕ್ಕಿಗಳು ಕರಾಟೆ ಕಲೀತಿದ್ದಾರೆ!
ಬೆಂಗಳೂರು, ಜ.16: ದೆಹಲಿ ಗ್ಯಾಂಗ್ ರೇಪ್-ಮರ್ಡರ್ ಬಳಿಕ ಅಧೀರರಾಗಿರುವ ಮಹಿಳಾ ಉದ್ಯೋಗಿಗಳು ಕೆಲಸಕ್ಕೆ ಗುಡ್ ಬೈ ಹೇಳುತ್ತಿರುವುದು ಮಾಮೂಲಿಯಾಗಿದೆ. ಆದರೆ ಬೆಂಗಳೂರು ಟೆಕ್ಕಿಗಳು ಮತ್ತು ಕಾಲ್ ಸೆಂಟರ್ ಉದ್ಯೋಗಿಗಳು ದುರ್ಭರ ಸನ್ನಿವೇಶಕ್ಕೆ ಬೆನ್ನು ತೋರಿಸದೆ ಧೈರ್ಯವಾಗಿ ಮುನ್ನುಗ್ಗಿ, ಒಂದು ಕರಾಟೆ ಪಂಚ್ ನೀಡಿ ಸ್ವಯಂರಕ್ಷಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಭಲೇ ವನಿತೆಯರು: ಹಾಗೆ ನೋಡಿದರೆ ದೇಶದ ಇತರೆ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರು ವನಿತೆಯರು ಹೆಚ್ಚು ಸುರಕ್ಷಿತರೆ. ಆದರೂ ಇತರೆಡೆ ನಡೆಯುತ್ತಿರುವ ಕ್ರೌರ್ಯವನ್ನು ನೋಡಿದರೆ ಯಾರಿಗೇ ಆಗಲಿ ಒಂದು ಕ್ಷಣ ಎದೆ ಝಲ್ಲೆನ್ನುತ್ತದೆ. ಹಾಗಿದೆ ಪಾತಕಿಗಳ ಅಟ್ಟಹಾಸ.

ಅದನ್ನು ಮೆಟ್ಟಿ ನಿಲ್ಲಲೆಂದೇ Electronics Cityಯಲ್ಲಿರುವ 120 ಐಟಿ ಕಂಪನಿಗಳಲ್ಲಿ ಮಹಿಳೆಯರ ಸ್ವಯಂರಕ್ಷಣೆಗೆಂದು ಕರಾಟೆ ತರಬೇತಿ ನೀಡಲಾಗುತ್ತಿದೆ. ಅಂದಹಾಗೆ Electronics Cityಯಲ್ಲಿ ಒಟ್ಟು ಅಂದಾಜು ಒಂದು ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲಿ ಶೇ. 35 ರಷ್ಟು ಮಹಿಳೆಯರೇ ಇದ್ದಾರೆ. ಅವರಲ್ಲಿ ಅರ್ಧಕ್ಕರ್ಧ ಮಹಿಳೆಯರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸುತ್ತಾರೆ. ಅವರಿಗೆ ಈ ತರಬೇತಿ ಆಪತ್ಪಾಂಧವ ಎನಿಸುತ್ತದೆ.
ಗಮನಾರ್ಹವೆಂದರೆ ಈ ಐಟಿ ಕಂಪನಿಗಳಲ್ಲಿ ದಿನ/ರಾತ್ರಿ ಪಾಳಿ ಎಂಬ ವ್ಯತ್ಯಾಸವೇ ಇಲ್ಲದಂತೆ ಮಹಿಳಾ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರತಾಗಿದ್ದಾರೆ. ಹಾಗಾಗಿ National Level Taekwondo Association ಜತೆ ಕೈಜೋಡಿಸಿರುವ Electronics City Industrial Association ಇದೇ ವಾರಾಂತ್ಯ (ಜನವರಿ 19 ಮತ್ತು 20) ಮಹಿಳಾ ಉದ್ಯೋಗಿಗಳಿಗಾಗಿ ವಿಶೇಷ ಸ್ವಯಂರಕ್ಷಣಾ ತರಬೇತಿ ನೀಡಲಿದೆ. ಮಹಿಳಾ ಉದ್ಯೋಗಿಗಳೂ ಹೀಗೆ ತರಬೇತಿ ಹೊಂದಲು ಭಾರಿ ಉತ್ಸುಕತೆ ತೋರಿದ್ದಾರೆ ಎಂದು ECIA ಮುಖ್ಯಸ್ಥ ಎನ್ಎಸ್ ರಮಾ ತಿಳಿಸಿದ್ದಾರೆ.
Infosys, HP ಮತ್ತು Wipro ತಮ್ಮ ತಮ್ಮ ಕಂಪನಿಗಳಲ್ಲೇ ನಿಗದಿತ ರೀತಿಯಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿವೆ.












Click it and Unblock the Notifications