ಶ್ರೀಮಂತ ಶಾಸಕ ಪ್ರಿಯಕೃಷ್ಣ ಮೇಲೆ ಮತ್ತೆ ದೂರು

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಮಾಹಿತಿಯನ್ವಯ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಸಾವಿರಾರು ಕೋಟಿ ರೂ.ಗಳ ಆಸ್ತಿ ಹೊಂದಿದ್ದಾರೆ. ಆದರೆ, ಚುನಾವಣಾ ಆಯೋಗಕ್ಕೆ ಮಾತ್ರ ಸಂಪೂರ್ಣ ಆಸ್ತಿಯ ವಿವರವನ್ನು ಸಲ್ಲಿಸಿಲ್ಲ ಎಂದು ದೂರುದಾರ ವಕೀಲ ಮುರುಳೀಧರ್ ಆರೋಪಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಸುಳ್ಳು ಆಸ್ತಿ ವಿವರಗಳನ್ನು ಸಲ್ಲಿಸಿರುವ ಅಪ್ಪ-ಮಕ್ಕಳಾದ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರ ಶಾಸಕತ್ವವನ್ನು ಕೂಡಲೆ ಅನರ್ಹಗೊಳಿಸುವಂತೆ ಅವರು ಮನವಿ ಸಲ್ಲಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ: ಅಧಿಕ ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆ ಜಾರಿಯಲ್ಲಿದೆ.
ಶಾಸಕ ಎಂ.ಕೃಷ್ಣಪ್ಪ ಮತ್ತವರ ಪತ್ನಿ ಪ್ರಿಯದರ್ಶಿನಿ, ಪುತ್ರರಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ವಿರುದ್ಧ ಅಪರಾಧ ದಂಡ ಪ್ರಕಿಯಾ ಸಂಹಿತೆ ಕಾಯ್ದೆ (ಸಿಆರ್‌ಪಿಸಿ) ಸೆಕ್ಷನ್ 156(3)ರಡಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷರಿಗೆ ನ್ಯಾ. ಸುಧೀಂದ್ರ ರಾವ್ ಅವರು ಆದೇಶಿಸಿದ್ದರು.
ಘೋಷಿಸಿರುವ ಆಸ್ತಿ ವಿವರಗಳಲ್ಲಿ ಸುಮಾರು 700 ಕೋಟಿ ರೂ. ನಷ್ಟು ವ್ಯತ್ಯಾಸವಿದೆ. ಆರೋಪಿಗಳು ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂದು ವಕೀಲ ಪ್ರಕಾಶ್ ಆರೋಪಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರಿಯಕೃಷ್ಣ ಅವರ ಆಸ್ತಿ ಮೊತ್ತದ ಅಂದಾಜು 700 ಕೋಟಿ ರು ಮೀರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಶಾಸಕ ಎಂ.ಕೃಷ್ಣಪ್ಪ ಅವರ ಕುಟುಂಬ ಸದಸ್ಯರಾದ ಪ್ರಿಯಾದರ್ಶಿನಿ, ಪ್ರಿಯಕೃಷ್ಣ, ಪ್ರದೀಪ್ ಹೆಸರಿನಲ್ಲಿ ಯಶವಂತಪುರ, ಗೆದ್ದಲಹಳ್ಳಿ ಹಾಗೂ ಇನ್ನಿತರ ಕಲ್ಯಾಣಮಂಟಪ, ವಾಣಿಜ್ಯ ಸಂಕೀರ್ಣ ಸೇರಿದಂತೆ ನೂರಾರು ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ.
ಮಾಗಡಿ ಬಳಿ 600 ಎಕರೆ ಭೂಮಿ ಸೇರಿದಂತೆ ನಗರದ ಸುತ್ತಮುತ್ತು ಸುಮಾರು 2000 ಎಕರೆ ಜಮೀನು ಹೊಂದಿದ್ದಾರೆ. ಈ ಅಸ್ತಿವಿವರಗಳಿಗೆ ಸರಿಯಾದ ದಾಖಲಾತಿ ಹೊಂದಿಲ್ಲ. ಶಾಸಕ ಸ್ಥಾನ ದುರ್ಬಳಕೆ ಎದ್ದು ಕಾಣುತ್ತಿದ್ದು, ತನಿಖೆ ನಡೆಸಬೇಕು ಎಂದು ವಕೀಲ ಪ್ರಕಾಶ್ ಮನವಿ ಸಲ್ಲಿಸಿದ್ದರು.












Click it and Unblock the Notifications