ಯಡಿಯೂರಪ್ಪ ಮಣಿಸಲು ಬಿಜೆಪಿ ಬೈಠಕ್

ವಿಧಾನಸಭೆ ಚುನಾವಣಾ ತಯಾರಿ, ಅಭ್ಯರ್ಥಿಗಳ ಆಯ್ಕೆ, ರಾಜ್ಯಾಧ್ಯಕ್ಷರ ಬದಲಾವಣೆ, ರಾಜ್ಯ ನಾಯಕತ್ವದ ವಿವಾದದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ಜನವರಿ 5 ರಂದು ಬೆಂಗಳೂರಿನಲ್ಲಿ ಬಿಜೆಪಿಚಿಂತನಾ ಬೈಠಕ್ ಕರೆಯಲಾಗಿದೆ. ಪಕ್ಷ ಸಂಘಟನೆ ಹಾಗೂ ಚುನಾವಣೆ ಸಿದ್ಧತೆ ಪ್ರಮುಖ ಚರ್ಚೆ ವಿಷಯ ಎಂದು ಬಿಜೆಪಿ ಮೂಲಗಳು ಹೇಳಿದೆ.
ಪಕ್ಷದ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು ಸಮಾಲೋಚನೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ
ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಡಿಸಿಎಂ ಕೆ.ಎಸ್. ಈಶ್ವರಪ್ಪ, ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಬೈಠಕ್‌ನಲ್ಲಿ ಚರ್ಚಿಸಲಾಗುವುದು ಎಂದರು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಆರ್. ಅಶೋಕ, ಸಂಸದಸದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೇರಿದಂತೆ ಪ್ರಮುಖರು ಪಾಲ್ಗೊಂಡು ಜಿಲ್ಲಾ ಮಟ್ಟದ ಮುಖಂಡರ ಅಹವಾಲು ಆಲಿಸಿ ಮುಂದಿನ ಚುನಾವಣೆ ಎದುರಿಸುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ
ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರು: ಈಗಾಗಲೇ ರಾಜ್ಯದಲ್ಲಿ 5 ತಂಡಗಳಲ್ಲಿ ಕೈಗೊಂಡ ಪ್ರವಾಸದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ ಈಶ್ವರಪ್ಪ, ಪ್ರವಾಸದ ಸಂದರ್ಭದಲ್ಲಿ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದರು.
ಕೆಜೆಪಿ vs ಬಿಜೆಪಿ: ಕೆಜೆಪಿ ಸವಾಲನ್ನು ಬಡಿದು ಹಾಕಿ ಸಮರಾಂಗಣಕ್ಕೆ ನುಗ್ಗಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಕೆಜೆಪಿ, ಜೆಡಿಎಸ್, ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಈಶ್ವರಪ್ಪ ಹೇಳಿದರು.
ಅರುಣ್ ಜೇಟ್ಲಿ ಅವರು ಜ.3 ರಂದು ಆಗಮಿಸುವ ನಿರೀಕ್ಷೆಯಿದೆ. ಜ.5 ರ ಚಿಂತನ್ ಬೈಠಕ್ ನಲ್ಲಿ ಭಾಗವಹಿಸುವ ಸಾಧ್ಯತೆಯೂ ಇದೆ. ಆದರೆ, ಕೊನೆ ಗಳಿಗೆಯಲ್ಲಿ ಅವರ ಪ್ರವಾಸ ಕಾರ್ಯಕ್ರಮ ಬದಲಾಗುವ ಸಾಧ್ಯತೆಯಿದೆ. ಒಟ್ಟಾರೆ ಬೈಠಕ್ ನಂತರ ರಾಜ್ಯ ಬಿಜೆಪಿಯಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಚುನಾವಣೆ ಸಿದ್ಧತೆಗೂ ಮುನ್ನ ರಾಜ್ಯಾಧ್ಯಕ್ಷರ ಸ್ಥಾನ ಹಾಗೂ ಸಾಮೂಹಿಕ ನಾಯಕತ್ವದ ಬಗ್ಗೆ ಅಂತಿಮ ತೀರ್ಮಾನ ಜ.5 ರ ನಂತರ ಸಿಗುವ ಸಾಧ್ಯತೆಯಿದೆ.
ಈ ನಡುವೆ ಅದೇ ದಿನ ಯಡಿಯೂರಪ್ಪ ಬೆಂಬಲಿತ 9 ಶಾಸಕರು ಬಿಜೆಪಿ ಶಾಸಕತ್ವಕ್ಕೆ ರಾಜೀನಾಮೆ ನೀಡುವ ಬಾಂಬ್ ಎಸೆಯುತ್ತಾರೆ ಎಂಬ ಸುದ್ದಿ ಇದೆ. ಶೆಟ್ಟರ್ ಅವರು ಬಜೆಟ್ ಮಂಡಿಸುವುದು ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲ ಎನ್ನಲಾಗಿದೆ. ಜಗದೀಶ್ ಶೆಟ್ಟರ್ ಮಾತ್ರ ಬಜೆಟ್ ಮಂಡನೆ ತಯಾರಿಯಲ್ಲಿದ್ದಾರೆ. ಏನಾಗುವುದೋ ಕಾದು ನೋಡಬೇಕಿದೆ.












Click it and Unblock the Notifications