ಸರ್ಕಾರದ ವಿರುದ್ಧ ವಿದ್ಯಾಮನೋಹರ ತೀರ್ಥರಿಗೆ ಸೋಲು

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ 15ನೇ ಶತಮಾನದ ಶ್ರೀ ಸೋಸಲೆ ವ್ಯಾಸರಾಜ ಮಠವನ್ನು ಭಾನುವಾರ (ಮೇ 27, 2012) ತಪಾಸಣೆ ನಡೆಸಿದ ನಂತರ ಮುಜರಾಯಿ ಇಲಾಖೆ ಅಧಿಕಾರಿಗಳು ಮಠವನ್ನು ಇಲಾಖೆ ಸುಪರ್ದಿಗೆ ತೆಗೆದುಕೊಂಡಿದ್ದರು.
ವಿದ್ಯಾಮನೋಹರ ತೀರ್ಥ ಸ್ವಾಮೀಜಿಯವರು ಮಠದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಅಲ್ಲದೆ ಭಕ್ತರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಈ ಕ್ರಮ ಕೈಗೊಂಡಿತ್ತು.
ಇದಕ್ಕೂ ಮುನ್ನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿಯ ಸೋಸಲೆ ವ್ಯಾಸರಾಜಮಠದ ವಿದ್ಯಾಮನೋಹರ ಸ್ವಾಮೀಜಿ ಅವರನ್ನು ಆಂಧ್ರಪ್ರದೇಶದ ಪೊಲೀಸರು ಮಾರ್ಚ್ 12ರಂದು ಬಂಧಿಸಿದ್ದರು. ಆದರೆ, ಬೆಂಗಳೂರಿನ ಬಸವನಗುಡಿಯ ಸೋಸಲೆ ಮಠದ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಪೀಠ ತ್ಯಜಿಸುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದ ಸ್ವಾಮೀಜಿಗಳು ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ಮುಜರಾಯಿ ಇಲಾಖೆ ವಶದಲ್ಲಿ ಮಠಗಳು: ಸರ್ಕಾರದಿಂದ ನೇಮಕಗೊಂಡ ಆಡಳಿತಾಧಿಕಾರಿ ಅವರ ಅನುಮತಿ ಇಲ್ಲದೆ ಮಠದಲ್ಲಿ ಯಾವುದೆ ಕಾರ್ಯಗಳನ್ನು ಜರುಗಿಸುವಂತಿಲ್ಲ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್ ಆದೇಶದಂತೆ ಸ್ವಾಮೀಜಿ ವಿರುದ್ಧ ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಮಠಕ್ಕೆ ಸೇರಿದ ಎರಡು ಚಿನ್ನದ ತಟ್ಟೆಯನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸ್ವಾಮೀಜಿಗಳು ಅಡವಿಟ್ಟು ರೂ 5 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಅಲ್ಲದೆ ಮಠಕ್ಕೆ ಸೇರಿದ ಕಲ್ಯಾಣ ಮಂಟಪ ನವೀಕರಣ ಮಾಡುವ ಸಲುವಾಗಿ ಖಾಸಗಿ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ಬಗ್ಗೆ ಕೂಡಾ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯಲ್ಲಿರುವ ಸೋಸಲೆ ವ್ಯಾಸರಾಜ ಮಠದ ಆಸ್ತಿಯನ್ನು ಕೂಡಾ ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಚೆಕ್ ಬೌನ್ಸ್ ಪ್ರಕರಣ: ಇನ್ನೊಂದು ಪ್ರಕರಣದಲ್ಲಿ ವ್ಯಾಸರಾಜಮಠದ ಈ ಹಿಂದಿನ ಸ್ವಾಮೀಜಿ ವಿದ್ಯಾವಾಚಸ್ಪತಿ ತೀರ್ಥ ಅವರು ಮಠದ ಆಸ್ತಿಯನ್ನು 30 ಲಕ್ಷ ರು.ಗಳಿಗೆ ಬೋಗ್ಯಕ್ಕೆ ಹಾಕಿದ್ದರು. ಅದನ್ನು ನಂತರ ಎರಡನೇ ಅವಧಿಗೆ ನವೀಕರಿಸಲಾಗಿತ್ತು. ಅವಧಿ ಪೂರ್ಣಗೊಂಡ ನಂತರ ಬೋಗ್ಯಕ್ಕೆ ನೀಡಿದ್ದ 70 ಲಕ್ಷ ರೂ.ಗಳನ್ನು ಚೆಕ್ ಮೂಲಕ ವಾಪಾಸ್ ಮಾಡಲಾಗಿತ್ತು.
ಆದರೆ, ಚೆಕ್ ಬೌನ್ಸ್ ಆದ ಕಾರಣ, ಪ್ರಕರಣ ದಾಖಲಾಗಿ, ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ಯಲಾಗಿದೆ. 2004ರಲ್ಲಿ ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಉದ್ಧವ ಆಚಾರ್ ಹಾಗೂ ಶ್ರೀಮತಿ ಅವರ ಪುತ್ರನಾದ ಶರತ್ ಆಚಾರ್ ಎಂಬುವರಿಗೆ ಸಂನ್ಯಾಸ ದೀಕ್ಷೆ ನೀಡಲಾಗಿತ್ತು.
ಸೋಸಲೆ ವ್ಯಾಸರಾಜಮಠದ ವಿದ್ಯಾವಾಚಸ್ಪತಿ ತೀರ್ಥ ಅವರು ತಮ್ಮ ಉತ್ತರಾಧಿಕಾರಿಗೆ ವಿದ್ಯಾಮನೋಹರ ತೀರ್ಥ ಎಂಬ ನಾಮವನ್ನು ನೀಡಿದ್ದರು. ವಿದ್ಯಾವಾಚಸ್ಪತಿ ತೀರ್ಥರ ಸಂಬಂಧಿಯೂ ಆಗಿದ್ದ ಶರತ್ ಆಚಾರ್ ಹೀಗೆ ವಿದ್ಯಾಮನೋಹರ ತೀರ್ಥ ಸ್ವಾಮೀಜಿ ಆಗಿ ಸೋಸಲೆ ಮಠದ ಪೀಠವನ್ನು ಅಲಂಕರಿಸಿದ್ದರು.












Click it and Unblock the Notifications