ಸಿದ್ದು, ಪರಮೇಶ್ವರ್ ಗೆ ಹೈಕಮಾಂಡ್ ಬುಲಾವ್

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರನ್ನು ಕೂಡಲೇ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ರಾಜ್ಯ ಕಾಂಗ್ರೆಸ್ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ. ಯಾರ ನೇತೃತ್ವದಲ್ಲಿ ಚುನಾವಣೆ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಮೂಲಗಳು ಹೇಳಿದೆ.
ವಿದೇಶಾಂಗ ಖಾತೆಗೆ ರಾಜೀನಾಮೆ ನೀಡಿ ರಾಜ್ಯಕ್ಕೆ ಮರಳಿದ್ದ ಎಸ್ ಎಂ ಕೃಷ್ಣ ಅವರಿಗೆ ಸಂಪೂರ್ಣವಾಗಿ ಕೆಪಿಸಿಸಿ ಪಟ್ಟ ನೀಡಲಾಗುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಕೆಪಿಸಿಸಿಯಲ್ಲಿ ನಾಯಕತ್ವ ಗೊಂದಲ ಮುಂದುವರೆದಿದೆ.
ಕೃಷ್ಣ ಮಾರ್ಮಿಕ ಉತ್ತರ: ಉತ್ತರಾಯಣ ಪುಣ್ಯ ಕಾಲದವರೆಗೂ ತಾಳ್ಮೆಯಿಂದಿರಿ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಬಾಲಗಂಗಾಧರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಹೇಳಿದ್ದರು.
ಸಂಕ್ರಾಂತಿ ತನಕ ತಾಳ್ಮೆಯಿಂದಿರಿ. ಕಾಂಗ್ರೆಸ್ ನನಗೆ ಎಲ್ಲವನ್ನು ನೀಡಿದೆ. ನಾನು ಸಾಮಾನ್ಯ ಕಾರ್ಯಕರ್ತ. ಪಕ್ಷ ಬಯಸುವ ಹುದ್ದೆಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದಿದ್ದಾರೆ.
ಸೋನಿಯಾ ಗಾಂಧಿ ಅವರ ನಾಯಕತ್ವದ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತೇನೆ. 50 ವರ್ಷದ ಸುದೀರ್ಘ ರಾಜಕೀಯ ಅನುಭವವನ್ನು ಪಕ್ಷಕ್ಕಾಗಿ ಧಾರೆ ಎರೆಯುತ್ತೇನೆ ಎಂದು ಹೇಳಿದ್ದಾರೆ.
ಈ ನಡುವೆ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಕೆಪಿಸಿಸಿ ಪಟ್ಟದ ಆಸೆಗೆ ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ತಣ್ಣಿರೆರಚಿದ್ದಲ್ಲದೆ ಎಚ್ಚರಿಕೆಯನ್ನು ನೀಡಿರುವುದು ಮಹತ್ವದ ತಿರುವು ಪಡೆಯುವ ಸಾಧ್ಯತೆಯಿದೆ.












Click it and Unblock the Notifications