ರೇಪ್ ಕಾನೂನ್ ವಿರುದ್ಧ ತಿರುಗಿಬಿದ್ದ ಭರತಖಂಡ
ಬೆಂಗಳೂರು, ಡಿ.29: ಡಿಸೆಂಬರ್ 16ರಂದು ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ ಶನಿವಾರ ಬೆಳಗ್ಗೆ ಸಾವನ್ನಪ್ಪಿದ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದ್ದು, ರೇಪ್ ಕಾನೂನು ವಿರುದ್ಧ ಭರತ ಖಂಡ ತಿರುಗಿ ಬಿದ್ದಿದೆ.
ದೆಹಲಿ ಸೇರಿದಂತೆ ಹಲವೆಡೆ ಸೆಕ್ಷನ್ 144 ಜಾರಿಗೊಳಿಸಿದ್ದರೂ ಜನರ ಪ್ರತಿಭಟನೆ ಪ್ರತಿ ಕ್ಷಣ ಹೆಚ್ಚಾಗುತ್ತಿದೆ. ಮುಂಬೈ, ಬೆಂಗಳೂರು, ಕೋಲ್ಕತ್ತಾದಲ್ಲಿ ಭಾನುವಾರ(ಡಿ.30) ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ನಡುವೆ ಶನಿವಾರ ಸಂಜೆ ವೇಳೆಗೆ ಮೃತ ಯುವತಿಯ ದೇಹವನ್ನು ಸಿಂಗಾಪುರದಿಂದ ನವ ದೆಹಲಿಗೆ ಕರೆತರಲಾಗುತ್ತಿದೆ. ಆರೋಪಿತ 6 ಅತ್ಯಾಚಾರಿಗಳಿಗೆ ಆದಷ್ಟು ಬೇಗ ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಅತ್ಯಾಚಾರಕ್ಕೊಳಗಾದ ಯುವತಿಯರ ಸ್ನೇಹಿತನ ಕುಟುಂಬ ಒತ್ತಾಯಿಸಿದೆ.
ಶನಿವಾರದಂದು ಜಂತರ್ ಮಂತರ್ ಬಳಿ ಮೆರವಣಿಗೆ, ಪ್ರತಿಭಟನೆ ಜಾರಿಯಲ್ಲಿದೆ. ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ, ಮನೀಷ್ ಸಿಸೋಡಿಯಾ ಹಾಗೂ ಕುಮಾರ್ ವಿಶ್ವಾಸ್ ಅವರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
JNU ಸೇರಿದಂತೆ ಹಲವು ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳು ಮೌನ ಮೆರವಣಿಗೆ ನಡೆಸಿದ್ದಾರೆ. ಪ್ರಗತಿ ಮೈದಾನ್, ಮಂಡಿ ಹೌಸ್, ಬರಕಾಂಬಾ ರಸ್ತೆ, ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರಟರಿಯೇಟ್, ಉದ್ಯೋಗ್ ಭವನ್, ರೇಸ್ ಕೋರ್ಸ್, ಖಾನ್ ಮಾರ್ಕೆಟ್ ಹಗೂ ಜೋರ್ ಭಾಗ್ ಮೊದಲಾದ ಕಡೆ ಇರುವ 10 ಮೆಟ್ರೋ ಸ್ಟೇಷನ್ ಗಳು ಬಂದ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಭಾನುವಾರ(ಡಿ.30) ರಂದು ಲೈಂಗಿಕ ಅಲ್ಪಸಂಖ್ಯಾತರ ಸಂಘ(KSMF), ಪ್ರಜಾ ರಾಜಕೀಯ ವೇದಿಕೆ(PRV), ಸಂಗಮ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್(SIO) ಜೊತೆಗೆ ಇನ್ನೂ ಅನೇಕ ಸಂಘಟನೆಗಳು ಟೌನ್ ಹಾಲ್ ಬಳಿ ಸೇರಿ ಪ್ರತಿಭಟನೆ ಮೆರವಣಿಗೆ ನಡೆಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ಕರೆ ಮಾಡಿ : 96322 23460/ 94839 50202/ 95918 02687, Email: [email protected]
ಜನ ಯುವತಿಯ ಸಾವಿಗೆ ಶೋಕ ವ್ಯಕ್ತಪಡಿಸಿದ್ದು, ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತಿದ್ದಾರೆ. ಮೃತಳ ಗೌರವಾರ್ಥ ದೇಶದ ರಾಷ್ಟ್ರ ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಬೇಕು ಎಂದು ಅಸಂಖ್ಯಾತ ಶೋಕತಪ್ತ ಜನ ಆಶಿಸಿದ್ದಾರೆ.
'ನಿರ್ಭಯ' (ಯುವತಿಗೆ ಮಾಧ್ಯಮಗಳು ನೀಡಿದ್ದ ಹೆಸರು) ಸಾವಿನ ಸುದ್ದಿ ಕೇಳಿ ಜನ ಮಮ್ಮಲಮರುಗಿದ್ದಾರೆ. ಅಲ್ಲಲ್ಲಿ ಸಭೆ ಸೇರಿ ಸಂತಾಪ ಸೂಚಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ಯುವತಿಯ ಸಾವಿನ ಸುದ್ದಿಯೇ. 15 ದಿನಗಳ ಕಾಲ ಸಾವು ಬದುಕಿನ ಮಧ್ಯೆ ದಿಟ್ಟ ಹೋರಾಟ ನಡೆಸಿದರೂ ನತದೃಷ್ಟಳು ಬದುಕಲಿಲ್ಲವಲ್ಲಾ ಎಂದು ಜನ ಬೇಸರಿಸಿಕೊಳ್ಳುತ್ತಿದ್ದಾರೆ.












Click it and Unblock the Notifications