ಬೆಂಗಳೂರು: ಇನ್ಫಿ ಟೆಕ್ಕಿ ಅನುಮಾನಾಸ್ಪದ ಸಾವು

ಪುಣೆಯ ಸ್ವಪ್ನೀಲ್ ಬದ್ರಿನಾರಾಯಣ್ ಮಲ್ಪಾಣಿ ಮೃತ ಟೆಕ್ಕಿ. ಪುಣೆ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸದಲ್ಲಿದ್ದ 23 ವರ್ಷದ ಬದ್ರಿನಾರಾಯಣ್ ಇತ್ತೀಚೆಗೆ ಪ್ರಾಜೆಕ್ಟ್ ವರ್ಕ್ ಗೆಂದು ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಕಂಪನಿಯ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಟೆಕ್ಕಿ ಬದ್ರಿನಾರಾಯಣ್ ಬುಧವಾರ ಕೆಲಸಕ್ಕೆ ಹಾಜರಾಗದಿದ್ದಾಗ ಅವರ ಸಹೋದ್ಯೋಗಿಯೊಬ್ಬರು ಮೊಬೈಲ್ ಮೂಲಕ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅದು ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಆ ಸಹೋದ್ಯೋಗಿ ತಡಮಾಡದೆ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಕಂಪನಿಯ ಗೆಸ್ಟ್ ಹೌಸ್ ಗೆ ಧಾವಿಸಿ, ಬದ್ರಿನಾರಾಯಣ್ ಉಳಿದುಕೊಂಡಿದ್ದ ಮನೆಗೆ ಬಂದು ನೋಡಿದ್ದಾರೆ.
ಮನೆ ಬಾಗಿಲು ತೆರೆದುಕೊಂಡೇ ಇತ್ತು. ಆದರೆ ಬದ್ರಿನಾರಾಯಣ್ ಕಾಣಿಸಿಲ್ಲ. ಮನೆಯೆಲ್ಲ ಜಾಲಾಡಿದಾಗ ಶೌಚಾಲಯ ಬಾಗಿಲು ಹಾಕಿರುವುದು ಕಂಡುಬಂದಿದೆ. ತಕ್ಷಣ ಕಂಪನಿಯ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಶೌಚಾಲಯದ ಬಾಗಿಲು ಒಡೆಸಲಾಗಿದೆ.
ಅಲ್ಲಿ ಬದ್ರಿನಾರಾಯಣ್ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಗಿದೆ. ಪ್ರಜ್ಞೆ ತಪ್ಪಿದ್ದ ಬದ್ರಿನಾರಾಯಣನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ತನಿಖೆ ನಡೆಸಿದ್ದಾರೆ. ಮೃತ ಬದ್ರಿನಾರಾಯಣ್ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಮುಂದಿನ ತನಿಖೆಗಾಗಿ ಶವಪರೀಕ್ಷೆ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications