ಮಂಡ್ಯದಲ್ಲಿ ಸ್ಪರ್ಧೆ ಖಚಿತ, ಕಾಂಗ್ರೆಸ್ ಅಧಿಕಾರಕ್ಕೆ: ಅಂಬಿ

ಅಸೆಂಬ್ಲಿ ಚುನಾವಣೆ ಯಲ್ಲಿ ಸ್ಪರ್ಧಿಸುವುದು ಖಚಿತ. ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಈ ಬಗ್ಗೆ ಹೈಕಮಾಂಡ್ ಗೆ ವಿಷಯ ತಿಳಿಸಿದ್ದೇನೆ ಎಂದು ಅಂಬರೀಷ್ ಹೇಳಿದ್ದಾರೆ. ಆದರೆ, ಮಂಡ್ಯ ಜಿಲ್ಲೆಯ ಯಾವ ಕ್ಷೇತ್ರ ಎಂಬ ಗುಟ್ಟನ್ನು ಅಂಬರೀಷ್ ಬಿಟ್ಟುಕೊಟ್ಟಿಲ್ಲ.
ವಿಧಾನಸಭೆಗೆ ಸ್ಪರ್ಧಿಸಿ ನಾನೊಬ್ಬನೇ ಗೆಲ್ಲುವುದು ಮುಖ್ಯವಲ್ಲ. ಮಂಡ್ಯ ಜಿಲ್ಲೆಯಿಂದ ನಾಲ್ಕೈದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು. ಆ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಹಾಸನ ಜಿಲ್ಲೆಯಿಂದ ಸ್ಪರ್ಧೆಗೆ ಆಹ್ವಾನ ಬಂದರೆ ಸ್ಪರ್ಧಿಸುತ್ತೀರಾ? ಇಲ್ಲೂ ಕೂಡಾ ೭ ವಿಧಾನಸಭಾ ಕ್ಷೇತ್ರಗಳಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಂಬರೀಷ್, ಇಲ್ಲ ಇಲ್ಲ ನಾನು ಮಂಡ್ಯದಲ್ಲೇ ಸ್ಪರ್ಧಿಸುತ್ತೇನೆ. ಮಂಡ್ಯ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಖಚಿತ ಎಂದರು.
ಜಾತಿ ರಾಜಕಾರಣದಿಂದ ಪಕ್ಷ ಸಂಘಟನೆಯಾಗಲೀ ಅಥವಾ ಅಧಿಕಾರ ಹಿಡಿಯಲು ಸಾಧ್ಯ ಆಗುವುದಿಲ್ಲ.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಾತಿ ಸಮೀಕರಣ ಆಗಬಹುದು ಎಂದು ರಾಜಕೀಯ ತಜ್ಞರಿಂದ ವಿಶ್ಲೇಷಣೆ ಬಂದಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಅಂಬರೀಷ್, ಜಾತಿ ರಾಜಕಾರಣದಿಂದ ಏನನ್ನೂ ಗಳಿಸಲು ಸಾಧ್ಯವಿಲ್ಲ ಎಂದರು. ಚುನಾವಣೆಯ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರ ಆಶೀರ್ವಾದ ಇದೆ. ಬಹುಮತ ಕೂಡ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರ ಇನ್ನಿಲ್ಲ: ರಾಜ್ಯದ ಜನ ಮೈತ್ರಿ ಸರ್ಕಾರ ನೋಡಿ ಬೇಸತ್ತು ಹೋಗಿದ್ದಾರೆ. ಮೈತ್ರಿ ಸರ್ಕಾರಗಳಿಂದ ಸುಭದ್ರ ಸರ್ಕಾರ ಅಸಾಧ್ಯ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಅಂಬರೀಷ್ ಹೇಳಿದರು.
ರಾಜ್ಯದಲ್ಲಿ ಒಂದು ಪಕ್ಷ, ಕೇಂದ್ರದಲ್ಲಿ ಮತ್ತೊಂದು ಪಕ್ಷ ಅಧಿಕಾರ ದಲ್ಲಿರುವುದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗಿರುವುದನ್ನು ಮನಗಂಡ ಜನತೆ ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಅಧಿ
ಕಾರಕ್ಕೆ ತರಲು ಮುಂದಾಗಿದ್ದು, ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಬೇಕೆಂದು ಕೋರಿದರು.












Click it and Unblock the Notifications