ಗಾಯಕಿ ನಿತ್ಯಶ್ರೀ ಪತಿ ಮಹಾದೇವನ್ ಆತ್ಮಹತ್ಯೆ

ಗುರುವಾರ ಮಧ್ಯಾಹ್ನ ಬಿಳಿ ಬಣ್ಣದ ಹೋಂಡಾ ಸಿಟಿ ಕಾರಿನಲ್ಲಿ ಡ್ರೈವರ್ ಜೊತೆ ಬಂದ ಮಹಾದೇವನ್ ಅವರು ಅಡ್ಯಾರ್ ನ ಕೊಟ್ಟುರ್ ಪುರಂ ಸೇತುವೆ ಬಳಿ ವಾಹನ ನಿಲ್ಲಿಸಲು ಹೇಳಿದ್ದಾರೆ. ನಂತರ ಕಾರಿನಿಂದ ಕೆಳಗಿಳಿದು ಫೋನಿನಲ್ಲಿ ಕೆಲ ಕಾಲ ಮಾತಾಡಿದ್ದಾರೆ. ನಂತರ ಸೇತುವೆಯಿಂದ ನದಿಗೆ ಹಾರಿದ್ದಾರೆ.
ನಂತರ ಮಹಾದೇವನ್ ಅವರನ್ನು ರಕ್ಷಿಸಲು ಅಗ್ನಿಶಾಮಕದಳಕ್ಕೆ ಡ್ರೈವರ್ ಕರೆ ಮಾಡಿದ್ದಾರೆ. ಸ್ಥಳೀಯರು ಕೂಡಾ ನದಿಗೆ ಹಾರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ನಿಮಿಷಗಳ ನಂತರ ಮಹಾದೇವನ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಮಾರ್ಗಮಧ್ಯದಲ್ಲೇ ಮಹಾದೇವನ್ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮಾರ್ಗಳಿ ಸಂಗೀತ ಉತ್ಸವದ ಸಂಭ್ರಮದಲ್ಲಿದ್ದ ಚೆನ್ನೈ ನಗರಕ್ಕೆ ಮಹಾದೇವನ್ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಗಿದೆ. ರಾಮರಾವ್ ಕಲ್ಯಾಣ ಮಂಟಪದಲ್ಲಿ ಸಂಗೀತ ಕಚೇರಿ ನೀಡಲು ತಯಾರಿ ನಡೆಸಿದ್ದ ನಿತ್ಯಶ್ರೀ ಅವರಿಗೆ ಭರಸಿಡಿಲು ಬಡಿದಂತೆ ಆಗಿದೆ.
ಪತಿಯ ಸಾವಿನ ದುಃಖ ತಾಳಲಾರದೆ ನಿತ್ಯಶ್ರೀ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗಿದೆ. ನಿತ್ಯಶ್ರೀ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ವಿಕಿಪೀಡಿಯ ಪುಟದಲ್ಲಿ ದಾಖಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ವಿಪರೀತ ಸಾಲಬಾಧೆಯಿಂದ ಮಹಾದೇವನ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಗಾಯಕಿ ನಿತ್ಯಶ್ರೀ: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ಡಿಕೆ ಪಟ್ಟಮ್ಮಾಳ್ ಅವರ ಮೊಮ್ಮಗಳಾದ ನಿತ್ಯಶ್ರೀ ಅವರು ಎಂಎಸ್ ಸುಬ್ಬಲಕ್ಷ್ಮಿ ಹಾಗೂ ಎಂಎಲ್ ವಸಂತಕುಮಾರಿ ಅವರ ನಂತರ ಸ್ಥಾನ ತುಂಬಿದ್ದರು.
ಎ.ಆರ್ ರೆಹಮಾನ್ ಅವರ ಸಂಗೀತ ನಿರ್ದೇಶನದಲ್ಲೂ ನಿತ್ಯಶ್ರೀ ತಮ್ಮ ಗಾನಸುಧೆ ಹರಿಸಿದ್ದರು, ಜೀನ್ಸ್ ಚಿತ್ರದ 'ಕಣ್ಣೊಡು ಕಾನ್ಬದೆಲ್ಲಂ', ಪಡೆಯಪ್ಪದ 'ಮಿನ್ಸಾರ ಕಣ್ಣ' ಸಂಗಮಮ್ ಚಿತ್ರದ 'ಸೌಖಿಯಮ ಕಣ್ಣೆ' ಸೇರಿದಂತೆ ಆಯಿರಥಿಲ್ ಓರುವನ್ ಚಿತ್ರದಲ್ಲೂ ಹಾಡಿದ್ದಾರೆ. ಮಹಾದೇವನ್ ಹಾಗೂ ನಿತ್ಯಶ್ರೀ ದಂಪತಿಗೆ ತನುಜಾಶ್ರೀ ಹಾಗೂ ತೇಜಶ್ರೀ ಇಬ್ಬರು ಪುತ್ರಿಯರಿದ್ದಾರೆ.












Click it and Unblock the Notifications