ಮೈಸೂರು: ಚಿನ್ನದ ವ್ಯಾಪಾರಿ ಪುತ್ರನ ಕಿಡ್ನಾಪ್, ಹತ್ಯೆ

ಇಲ್ಲಿನ ವಿಜಯನಗರ ರೈಲ್ವೆ ಲೇ ಔಟ್ ಬಡಾವಣೆಯ ಮನೆಯಿಂದ ಡಿ. 12ರಂದು ಸಂಜೆ 7.30 ರಲ್ಲಿ ಅಪಹೃತನಾಗಿದ್ದ ಸಂಜಯ್ ಹತ್ಯೆಗೀಡಾಗಿದ್ದು, ಅವನ ಶವ ಜಯಪುರ ಬಳಿಯ ವರುಣಾ ನಾಲೆ ದೊಡ್ಡಕಾಟಿಕೆರೆ ಬಳಿ ಬುಧವಾರ ಸಂಜೆ ಪತ್ತೆಯಾಗಿದೆ.
ಸಂಜಯನನ್ನು ನಾಲ್ಕೈದು ದಿನಗಳ ಹಿಂದೆಯೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೇಲ್ನೋಟಕ್ಕೆ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಆದರೆ ಶವ ಸಂಪೂರ್ಣ ಕೊಳೆತಿರುವ ಸ್ಥಿತಿಯಲ್ಲಿದೆ. ಪೋಸ್ಟ್ ಮಾರ್ಟಂ ವರದಿ ಬಳಿಕ ಕೊಲೆ ಯಾವ ರೀತಿಯಾಗಿದೆ ಎಂಬುದು ಗೊತ್ತಾಗಲಿದೆ.
ಅಪಹರಣದ ವೃತ್ತಾಂತ: ಸಂಜಯ, ನಗರದ ವಿದ್ಯಾಶ್ರಮ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಆತನ ತಂದೆ ತಾರಾರಾಮ್ ಅವರು ಕಾಳಿದಾಸ ರಸ್ತೆಯಲ್ಲಿ ಪಂಚರತ್ನ ಆಭರಣ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರ ಸಹೋದರರು ಕಾಳಿದಾಸ ರಸ್ತೆಯಲ್ಲಿ ಪಾನ್ ಬ್ರೋಕರ್ ಅಂಗಡಿಗಳನ್ನು ಹೊಂದಿದ್ದಾರೆ. ತಾರರಾಮ್ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಸಂಜಯ ಹಿರಿಯ ಮಗ. ಇವರಿಗೆ ಇನ್ನೂ ಇಬ್ಬರು ಗಂಡು ಮಕ್ಕಳಿದ್ದಾರೆ.
50 ಲಕ್ಷ ರೂ. ಒತ್ತೆ ಹಣ: ಅಪಹರಣಕಾರನೊಬ್ಬ ಸಂಜಯನ ಹತ್ತಿರವಿದ್ದ ಆತನ ತಾಯಿಯ ಮೊಬೈಲಿನಿಂದ ಅಂದೇ ರಾತ್ರಿ 9.30ಕ್ಕೆ ಫೋನ್ ಮಾಡಿ, 50 ಲಕ್ಷ ರೂ. ಒತ್ತೆ ಹಣ ನೀಡುವಂತೆ ಕೇಳಿದ್ದಾನೆ. ಆನಂತ ಕಾಂಟ್ಯಾಂಕ್ಟ್ ತಪ್ಪಿದೆ.
ಆದರೆ ತಕ್ಷಣ ಆತನ ಪೋಷಕರು ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೊಬೈಲ್ ಫೋನ್ ಟವರ್ ಪತ್ತೆ ಹಚ್ಚಿ, ಮಂಡಿ ಮೊಹಲ್ಲಾದಿಂದ ಆರೋಪಿಗಳು ಫೋನ್ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ.
20 ತನಿಖಾ ತಂಡಗಳು: ಅಪಹರಣವನ್ನು ಭೇದಿಸಲು 20ಕ್ಕೂ ಹೆಚ್ಚು ವಿಶೇಷ ತನಿಖೆ ತಂಡಗಳನ್ನು ನಿಯೋಜಿಸಲಾಗಿತ್ತು. ಚೆನ್ನೈ, ಬೆಂಗಳೂರು, ತಿರುಪತಿ ಪೊಲೀಸರ ನೆರವನ್ನು ಪಡೆದರೂ ಕೃತ್ಯ ಭೇದಿಸಲು ಸಾಧ್ಯವಾಗಲಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆಎಲ್ ಸುಧೀರ್ ವಿಷಾದಿಸಿದ್ದಾರೆ.
ಪ್ರಕರಣ ದುರದೃಷ್ಟಕರ, ತನಿಖೆ ಮುಂದುವರಿದಿದ್ದು, ಶೀಘ್ರ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೋಷಕರು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದರೂ ಈ ಪ್ರಕರಣದಲ್ಲಿ ತಕ್ಷಣಕ್ಕೆ ಆರೋಪಿಗಳನ್ನು ಬಂಧಿಸಲಾಗಲಿಲ್ಲ ಎಂದಿದ್ದಾರೆ.












Click it and Unblock the Notifications