ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಿಜೆಪಿ ವಿರೋಧ

ಮುತಾಲಿಕ್ ಅವರು ನೀಡಿದ ಕಾರಣಕ್ಕೂ ಬಿಜೆಪಿ ಆಗ್ರಹಕ್ಕೂ ವ್ಯತ್ಯಾಸವಿದ್ದರೂ ಗುರಿ ಮಾತ್ರ ಪಾಕ್ ಜೊತೆಗಿನ ಮೈತ್ರಿಗೆ ವಿರೋಧಿಸುವುದೇ ಆಗಿದೆ.
ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲ್ಲಿಕ್ ಅವರು ಭಾರತಕ್ಕೆ ಅವಮಾನ ಮಾಡಿದರೂ ಕೇಳಿಕೊಂಡು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುಮ್ಮನಿದ್ದರು. 26/11 ಮುಂಬೈ ಮೇಲಿನ ಉಗ್ರರ ದಾಳಿ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಒಂದೇ ರೀತಿಯಲ್ಲಿ ಮಲ್ಲಿಕ್ ಸಮೀಕರಿಸಿದ್ದಾರೆ.
ಲಷ್ಕರ್ ಇ ತೋಯ್ಬಾ ಉಗ್ರ ಅಬು ಜುಂದಾಲ್ ನನ್ನು ಗುಪ್ತಚರ ಇಲಾಖೆ ಗೂಢಚಾರಿ ಎಂದು ಹೇಳಿದ್ದಾರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
ಮಲ್ಲಿಕ್ ಭಾರತ ಭೇಟಿಯಿಂದ ಮನಸ್ಸು ಕದಡಿರುವಾಗ ಭಾರತ ಮತ್ತು ಪಾಕಿಸ್ತಾನ ನಡುವೆ ಸೌಹಾರ್ದ ಸರಣಿ (ಡಿ.25 ರಿಂದ ಬೆಂಗಳೂರಿನಲ್ಲಿ ಆರಂಭ) ಆಡುವುದರಲ್ಲಿ ಅರ್ಥವಿಲ್ಲ ಎಂದು ಹಿರಿಯ ಮುಖಂಡ ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ರೆಹ್ಮಾನ್ ಮಲ್ಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಲು ಗೃಹ ಸಚಿವ ಶಿಂಧೆ ಅಸಮರ್ಥರಾಗಿದ್ದಾರೆ. ಭಾರತಕ್ಕೆ ಅಪಮಾನವಾದರೂ ಶಿಂಧೆ ಸುಮ್ಮನಿದ್ದರು ಎಂದು ಬಿಜೆಪಿ ಆರೋಪಿಸಿದೆ.
ಮುಂಬೈ ದಾಳಿ ಪ್ರಕರಣದಲ್ಲಿ ಎಲ್ ಐಟಿ ಉಗ್ರ ಹಫೀಜ್ ಸಯೀದ್ ಪಾತ್ರದ ಕುರಿತು ಭಾರತ ತಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ರೆಹಮಾನ್ ಮಲ್ಲಿಕ್ ಹೇಳಿದ್ದರು.
ಇದಕ್ಕೆ ಕೊನೆಗೂ ಪ್ರತಿಕ್ರಿಯಿಸಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, 26/11ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಸಿಕ್ಕ ಸಾಕ್ಷಿಗಳಾನ್ನು ಪಾಕ್ ಗೆ ನೀಡಿದ್ದೇವೆ. ಹಫೀಜ್ ಸಯೀದ್ ಪಾತ್ರ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಮುತಾಲಿಕ್ ವಿರೋಧ: ಪ್ರಾಣ ತ್ಯಾಗ ಮಾಡಿಯಾದರೂ ಸರಿ ಡಿ.25ರ ಕ್ರಿಸ್ಮಸ್ ಹಬ್ಬದ ದಿನದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನದ ವಿರುದ್ಧದ ಟ್ವೆಂಟಿ20 ಪಂದ್ಯವನ್ನು ನಡೆಯಲು ಬಿಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೆ ಬೆಂಗಳೂರು ಪಂದ್ಯವನ್ನು ನಡೆಯಲು ಅವಕಾಶ ಮಾಡಿಕೊಡುವುದಿಲ್ಲ. ನಮ್ಮ ಮನವಿ ತಿರಸ್ಕರಿಸಿ ಪಂದ್ಯಕ್ಕೆ ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಭಾರತ ಪಾಕ್ ಪಂದ್ಯ ನಡೆಸುತ್ತಿರುವುದನ್ನು ವಿರೋಧಿಸಿ ಡಿ.17 ಸೋಮವಾರದಂದು ಬೆಂಗಳೂರು ಬಂದ್‌ಗೆ ಕರೆ ನೀಡುವುದಾಗಿ ಅವರು ಹೇಳಿದ್ದು, ಕರ್ನಾಟಕದಾದ್ಯಂತ 118 ಕಡೆಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದೆ.
ಈಗಾಗಲೇ 3000 ಜನಕ್ಕೆ ಭಾರತ ಪ್ರವೇಶಿಸಲು ವೀಸಾ ನೀಡಲು ಸರ್ಕಾರ ಮುಂದಾಗಿರುವ ಬಗ್ಗೆ ಸುದ್ದಿಯಿದೆ. ಕ್ರಿಕೆಟ್ ಮುಂದಿಟ್ಟುಕೊಂಡು ಭಾರತದ ಒಳಗೆ ನುಗ್ಗುವ ದುಷ್ಕರ್ಮಿಗಳು ಡ್ರಗ್ ಮಾಫಿಯಾ, ಖೋಟಾ ನೋಟು ಮಾಫಿಯಾ, ಬೆಟ್ಟಿಂಗ್ ವ್ಯವಹಾರ ನಡೆಸುತ್ತಾರೆ ಎಂದು ಮುತಾಲಿಕ್ ವಿವರಿಸಿದರು.
ಪ್ರವಾಸಿ ಪಾಕಿಸ್ತಾನ ತಂಡ 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ತಂಡ ಡಿ.22 ರಂದು ಭಾರತಕ್ಕೆ ಆಗಮಿಸಲಿದ್ದು, ಡಿ.25 ರಂದು ಮೊದಲ ಪಂದ್ಯವಾಡಲಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟಿ20 ಆಯೋಜಿಸಲಾಗಿದೆ. ಡಿ.27 ರಂದು ಅಹಮದಾಬಾದಿನಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. (ಪಿಟಿಐ)












Click it and Unblock the Notifications