ಮತ್ತೆ ಸಿಎಂ ಮಾಡ್ತೇವೆ: ಎಚ್ಡಿಕೆಗೆ ಹುಟ್ಟುಹಬ್ಬದ ವಾಗ್ದಾನ

ಹುಟ್ಟುಹಬ್ಬದ ಕಾಣಿಕೆಯಾಗಿ ಮುಂದಿನ ಮುಖ್ಯಮಂತ್ರಿಯನ್ನಾಗಿ ತಮ್ಮನ್ನೇ ಚುನಾಯಿಸಿ ಕಳಿಸುವುದಾಗಿ ಅಭಿಮಾನಿಗಳು/ಪಕ್ಷದ ಕಾರ್ಯಕರ್ತರು ಕುಮಾರಿಸ್ವಾಮಿಗೆ ವಾಗ್ದಾನ ನೀಡಿದ್ದಾರೆ. ಜೆಪಿ ನಗರದಲ್ಲಿರುವ ತಮ್ಮ ಮನೆಯ ಮುಂದೆ ನಿನ್ನೆ ಜಮಾಯಿಸಿದ್ದ ಜನರನ್ನು ಕಂಡು ಎಚ್ ಡಿ ಕುಮಾರಸ್ವಾಮಿ ಸಂಭ್ರಮಗೊಂಡಿದ್ದಾರೆ.
ಕುಮಾರಸ್ವಾಮಿಗೆ ಮತ್ತೂಮ್ಮೆ ಸಿಎಂ ಅಧಿಕಾರ ಲಭಿಸಲಿ ಎಂದು ಅಭಿಮಾನಿಗಳು ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಹೆಚ್ಚು ಬಹುಮತದಿಂದ ಗೆಲ್ಲಿಸುವುದರ ಮೂಲಕ ಕುಮಾರಸ್ವಾಮಿಯವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ರಾಮನಗರದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
'ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದವರಲ್ಲಿ ಒಬ್ಬರಾದ ಕುಮಾರಸ್ವಾಮಿಯವರು, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನ-ಮನ ಗೆದ್ದಿದ್ದಾರೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಿ ಜನರ ಆರ್ಶೀವಾದದಿಂದ ಮತ್ತೂಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಅಧಿಕಾರ ಲಭಿಸಲಿ ಎಂದು ವಿಧಾನ ಪರಿಷತ್ ಸದಸ್ಯ ರಾಮಕೃಷ್ಣ ಆಶಿಸಿದ್ದಾರೆ.
ಹಿಂದಿನ ಸುದ್ದಿ: ವಿಧಾನಸಭೆ ಚುನಾವಣೆ ಹುಮ್ಮಸ್ಸಿನಲ್ಲಿರುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಇಂದು 54ನೆಯ ಹುಟ್ಟುಹಬ್ಬ. ಹಾಗಾಗಿ ನಾಡಿನಾದ್ಯಂತ ಕುಮಾರಸ್ವಾಮಿ ಅಭಿಮಾನಿಗಳು ಅತ್ಯುತ್ಸಾಹದಿಂದ ಅವರ ಜನ್ಮ ದಿನಾಚರಣೆಯಲ್ಲಿ ತೊಡಗಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹರದಹಳ್ಳಿಯಲ್ಲಿ 1959 ಡಿಸೆಂಬರ್ 16ರಂದು ಇವರ ಜನನ. ಸಂಸತ್ ಸದಸ್ಯರೂ ಆಗಿರುವ ಕುಮಾರಸ್ವಾಮಿ ಇಂದು ಬೆಂಗಳೂರಿನಲ್ಲೇ ಇದ್ದು, ಅಭಿಮಾನಿಗಳ ಜತೆ ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಶನಿವಾರ ರಾತ್ರಿಯಿಂದಲೇ ಅವರಮನೆ ಮುಂದೆ ಜಮಾಯಿಸಿದ್ದ ಅಪಾರ ಅಭಿಮಾನಿಗಳು 'ತಮ್ಮ ಪ್ರೀತಿಯ ಕುಮಾರಣ್ಣ' ಜನ್ಮದಿನಕ್ಕೆ ಶುಭಕೋರಿದ್ದರು. ನಂತರ ಕುಮಾರಸ್ವಾಮಿ ಅವರ ಕೈಯಲ್ಲಿ ಕೇಕ್ ಕಟ್ ಮಾಡಿಸಿ, ಸಂಭ್ರಮಾಚರಣೆಯಲ್ಲಿ ತೊಡಗಿದರು. ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು 54 ಕೆಜಿ ತೂಕದ ಕೇಕ್ ಕತ್ತರಿಸಿ, ಸಂಭ್ರಮಿಸಿದರು.
'ಯುವಕರ ವಿಶ್ವಾಸ, ಪ್ರೀತಿ ಅಭಿಮಾನದಿಂದ ಮೂಕಸ್ಮಿತನಾಗಿದ್ದೇನೆ. ನನ್ನ ಇಡೀ ಜೀವನ ಮುಡಿಪಿಟ್ಟರೂ ಅವರ ಋಣ ತೀರಿಸಲಾಗದು. ಯುವಕ ಸ್ನೇಹಿತರ ಪ್ರೀತಿಗೆ ಚಿರಋಣಿ. ಅವರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯಲು ದುಡಿಯುವೆ' ಎಂದು ಕುಮಾರಸ್ವಾಮಿ ಯುವ ಅಭಿಮಾನಿಗಳನ್ನುದ್ದೇಶಿಸಿ, ಮಾತನಾಡಿದರು.
ಇನ್ನು, ಎಚ್ ಡಿಕೆ ಅಭಿಮಾನಿಗಳ ಸಂಘಗಳು ನಾನಾ ಕಡೆ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ. ವಿವಿಧ ಜಿಲ್ಲಾ/ತಾಲೂಕುಗಳಲ್ಲೂ ಅಭಿಮಾನಿ ಸಂಘಗಳು ಸಂಭ್ರಮಾಚರಣೆಯಲ್ಲಿ ತೊಡಗಿವೆ. ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಲಾಡು, ಕೇಕ್ ವಿತರಣೆ ಹಾಗೂ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ಹಣ್ಣು ಹಂಪಲು, ಬ್ರೆಡ್ ವಿತರಿಸುತ್ತಿದ್ದಾರೆ.












Click it and Unblock the Notifications