ಖಾಸಗಿ ವಿವಿ ವಿಧೇಯಕ 100 ಕೋಟಿ ಡೀಲ್

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಕಲಾಪದಲ್ಲಿ ಮಂಡಿಸಲಾದ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಖಾಸಗಿ ವಿವಿಗಳ ವಿಧೇಯಕಗಳಿಗೆ ಅಂಗೀಕಾರ ನೀಡಬಾರದು ಎಂದು ರಾಜ್ಯಪಾಲರಿಗೆ ಜೆಡಿಎಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಪ್ರತಿಪಕ್ಷಗಳು ಇಲ್ಲದೆ ಆತುರಾತುರವಾಗಿ ವಿಧೇಯಕ ಮಂಡಿಸಿ, ಬಹುಮತ ಪಡೆದಿದ್ದು ಸರ್ಕಾರದ ಸಾಧನೆಯಾಗಿದೆ. ಇದಕ್ಕಿಂತ ಮುಖ್ಯವಾಗಿ ವಿಧೇಯಕಗಳ ಹಿಂದೆ ಭಾರಿ ಲಾಬಿ ನಡೆದಿದೆ. ಸರ್ಕಾರಕ್ಕೆ ವಿವಿಧ ಮೂಲಗಳಿಂದ 100 ಕೋಟಿ ರು ಸಂದಿದೆ. ಹೀಗಾಗಿ ಆತುರವಾಗಿ ವಿಧೇಯಕ ಮಂಡಿಸಲಾಗಿದೆ. ಪ್ರತಿಪಕ್ಷಗಳಿಗೆ ವಿಧೇಯಕಗಳ ಬಗ್ಗೆ ಚರ್ಚೆ ನಡೆಸುವ ಅವಕಾಶವನ್ನು ನೀಡಿಲ್ಲ ಎಂದು ಎಂಸಿ ನಾಣಯ್ಯ ಕಿಡಿಕಾರಿದ್ದಾರೆ.
ಎಂಟು ವಿಶ್ವವಿದ್ಯಾಲಯಗಳ ಪೈಕಿ 4 ವಿಶ್ವವಿದ್ಯಾಲಯಗಳು ಡೀಮ್ಡ್ ವಿವಿ ಎಂದು ಮಾನ್ಯತೆ ಪಡೆದಿದೆ. ಅವುಗಳನ್ನು ಸೇರಿಸಿ 8 ಖಾಸಗಿ ವಿವಿ ವಿಧೇಯಕ ಅಂಗೀಕಾರ ಪಡೆದಿರುವುದು ಸರಿಯಲ್ಲ ಎಂದು ನಾಣಯ್ಯ ಹೇಳಿದರು.
ಇನ್ನು ಗೋಹತ್ಯೆ ನಿಷೇಧ ಈಗಾಗಲೇ ರಾಜ್ಯಪಾಲರಿಂದ ಒಮ್ಮೆ ತಿರಸ್ಕರಿಸಲ್ಪಟ್ಟಿದೆ. ಆದರೆ, ಸೂಕ್ತ ತಿದ್ದುಪಡಿ ಮಾಡಿಕೊಂಡು ವಿಧೇಯಕ ಮಂಡನೆ ಮಾಡುವ ಭರವಸೆ ನೀಡಿದ್ದ ಸರ್ಕಾರ ತನ್ನ ಮಾತಿಗೆ ತಪ್ಪಿದೆ. ವಿಧೇಯಕದ ಪ್ರತಿಯಲ್ಲೂ ದೋಷಗಳು ಕಂಡುಬಂದಿದೆ. ವಿಧೇಯಕ ಮಂಡನೆ, ಅಂಗೀಕಾರದಲ್ಲೂ ತಪ್ಪು ಎಸೆಗಲಾಗಿದೆ.
ಗೋಹತ್ಯೆ ನಿಷೇಧ ಮತ್ತು ಜಾನುವಾರು ವಿಧೇಯಕದಿಂದ ಅಲ್ಪಸಂಖ್ಯಾತರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ನಾಣಯ್ಯ ಅಭಿಪ್ರಾಯಪಟ್ಟರು.
ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಕಲಾಪದಲ್ಲಿ ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ ಮಸೂದೆಯನ್ನು ಮಂಡಿಸಲಾಗಿದೆ. ಅದಕ್ಕೆ ತುರ್ತಾಗಿ ನೀವು ಮಧ್ಯಪ್ರವೇಶಿಸಿ ತಡೆ ನೀಡಬೇಕೆಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.
ಮಣಿಪಾಲದ ಮಾಹೆ, ಬೆಂಗಳೂರಿನ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ, ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ , ದಯಾನಂದ ಸಾಗರ ಶಿಕ್ಷಣ ಸಂಸ್ಥೆ, ವೆಲ್ಲೂರು ತಾಂತ್ರಿಕ ಸಂಸ್ಥೆ, ಅರ್ಕ, ದೇವರಾಜ್‌ಅರಸ್ ಮತ್ತು ಶರಣ ಬಸವ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ಆದ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ಕೊಡಲು ವಿಧಾನಸಭೆ ಸಮ್ಮತಿ ಸೂಚಿಸಿದೆ.
ಈ ವಿವಿಗಳಿಗೆ ಸ್ವಾಯತ್ತ ನೀಡಿದರೂ ಸರ್ಕಾರದ ಹಿಡಿತ ಇದ್ದೇ ಇರುತ್ತದೆ. ಈ ವಿವಿಗಳಲ್ಲಿ ಸರ್ಕಾರಕ್ಕೆ ಶೇ. 40 ರಷ್ಟು ಸೀಟುಗಳು ನಿಗದಿಯಾಗಿರುತ್ತವೆ. ಈ ಸೀಟುಗಳಿಗೆ ಶುಲ್ಕ ನಿಗದಿ ಮಾಡುವುದಕ್ಕಾಗಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಲಾಗುತ್ತದೆ.
ಒಂದು ವೇಳೆ ಸರ್ಕಾರದ ನೀತಿ ನಿರೂಪಣೆಗಳನ್ನು ಉಲ್ಲಂಘಿಸಿದರೆ ಅಂತಹ ವಿವಿಗಳ ವಿರುದ್ಧ ಕ್ರಮ ಜರುಗಿಸುವ ಧಿಕಾರ ಸರ್ಕಾರಕ್ಕಿರುತ್ತದೆ ಎಂದರು. ಅಲ್ಲದೇ, ವಿಶ್ವವಿದ್ಯಾಲಯಗಳ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಸಂಬಂಧ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ರವಿ ಹೇಳಿದರು.












Click it and Unblock the Notifications