ಖಾಸಗಿ ವಿವಿ ಮಸೂದೆ ಖಂಡಿಸಿ ವಿಪಕ್ಷಗಳ ಸಭಾತ್ಯಾಗ

ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಜ್ಞಾನಾಧಾರಿತ ಹಣಕಾಸು ವ್ಯವಸ್ಥೆಗೆ ಖಾಸಗಿ ವಿಶ್ವವಿದ್ಯಾಲಯ ಮಸೂದೆ ಮಂಡನೆ ಇಂಬುಕೊಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಪ್ರಸ್ತಾಪಿಸುತ್ತಿದ್ದಂತೆ, ಈ ಮಸೂದೆ ಮಂಡನೆಯ ಹಿಂದೆ ಭ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ ಎಂದು ಆರೋಪಿಸಿದ ವಿರೋಧಪಕ್ಷಗಳು ಧಿಕ್ಕಾರಗಳನ್ನು ಕೂಗುತ್ತ ಸದನದಿಂದ ಹೊರನಡೆದವು.
ಒಂದು ವೇಳೆ ಖಾಸಗಿ ವಿಶ್ವವಿದ್ಯಾಲಯ ಮಸೂದೆ ಮಂಡನೆಯಾದರೆ ಸರಕಾರವೇ ಖಾಸಗಿ ಸಂಸ್ಥೆಗಳಿಗೆ ಜಮೀನು ನೀಡಬೇಕಾಗುತ್ತದೆ. ಬಿಬಿಎಂಪಿ ವಲಯದಲ್ಲಾದರೆ 25 ಎಕರೆ, ಬಿಬಿಎಂಪಿ ಹೊರವಲಯದಲ್ಲಾದರೆ 30 ಎಕರೆ ಮತ್ತು ದೂರದ ಪ್ರದೇಶದಲ್ಲಾದರೆ ಸರಕಾರ ಖಾಸಗಿ ಸಂಸ್ಥೆಗಳಿಗೆ 50 ಎಕರೆ ಜಮೀನು ಮಂಜೂರು ಮಾಡಬೇಕಾಗುತ್ತದೆ. ಇದು ಮತ್ತಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂಬುದು ವಿರೋಧಪಕ್ಷಗಳ ವಾದ.
ಆದರೆ, ಇದರಲ್ಲಿ ಅಂಥದಕ್ಕೆ ಅವಕಾಶವಿಲ್ಲ. ಇಂಡಿಯಾ ನಾಲೇಜ್ ಕಮಿಷನ್ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ಶಿಫಾರಸು ಮಾಡಿದೆ ಎಂದು ಪ್ರತಿವಾದಿಸಿದ ಸಿಟಿ ರವಿ ಅವರು, ತಮ್ಮ ಭಾಷಣದಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿ ಶಿಕ್ಷಣವನ್ನು ಉನ್ನತೀಕರಿಸಿದ ಉದಾಹರಣೆಗಳನ್ನು ನೀಡಿದರು. ಈ ವಾದ ಒಪ್ಪಿಗೆಯಾಗದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗ ಮಾಡಿದವು.
ವಿರೋಧಪಕ್ಷಗಳು ವಾಕೌಟ್ ಮಾಡಲು ಮತ್ತೊಂದು ಕಾರಣವೇನೆಂದರೆ, ಸರಕಾರ ಚಳಿಗಾಲದ ಅಧಿವೇಶನದ ಕೊನೆಯ ದಿನ 14 ವಿವಿಧ ಮಸೂದೆಗಳನ್ನು ಮಂಡಿಸುತ್ತಿದೆ. ಇವುಗಳ ಬಗ್ಗೆ ಚರ್ಚೆಯಾಗದೆ ಮಸೂದೆ ಮಂಡನೆಯಾಗಬಾರದು. ಆದರೆ, ಸರಕಾರ ಚರ್ಚೆಗೆ ಅವಕಾಶವನ್ನೇ ಕೊಡದೆ, ತರಾತುರಿಯಲ್ಲಿ ಮಸೂದೆ ಮಂಡಿಸಲು ಹುನ್ನಾರ ನಡೆಸಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ.
ವಿರೋಧಪಕ್ಷಗಳಿಂದ ಈ ಎಲ್ಲ ಮಸೂದೆ ಬಗ್ಗೆ ಚರ್ಚೆಗೆ ಅವಕಾಶ ಒದಗಿಸಲು ಅಧಿವೇಶನವನ್ನು ಇನ್ನೊಂದು ದಿನಕ್ಕೆ ಮುಂದುವರಿಸಬೇಕೆಂದು ಕೂಗು ಬಂದಿದ್ದರೂ ಸಭಾಧ್ಯಕ್ಷ ಕೆ.ಜೆ. ಬೋಪಯ್ಯ ಅವರು ನಿರಾಕರಿಸಿದ್ದಾರೆ. ಎರಡೂ ಪ್ರಮುಖ ವಿರೋಧಪಕ್ಷಗಳು ವಾಕೌಟ್ ಮಾಡಿರುವುದರಿಂದ ಎಲ್ಲ ಮಸೂದೆಗಳು ನಿರಾತಂಕವಾಗಿ ಮಂಡನೆಯಾಗುವ ಸಾಧ್ಯತೆಗಳಿವೆ. ಈ ನಡುವೆ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಸಂಪರ್ಕಿಸಿ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ನೀಡಬಾರದು ಎಂದು ಒತ್ತಾಯಿಸಲಿದ್ದಾರೆ.












Click it and Unblock the Notifications