ಗೋಹತ್ಯೆ ವಿಧೇಯಕ ಮಂಡನೆ, ವಿಪಕ್ಷಗಳ ಖಂಡನೆ
ಬೆಳಗಾವಿ, ಡಿ.13: ವಿವಾದಿತ ಗೋಹತ್ಯೆ ನಿಷೇಧ ವಿಧೇಯಕವನ್ನು ಸಚಿವ ರೇವೂ ನಾಯಕ ಬೆಳಮಗಿ ಅವರು ಗುರುವಾರ(ಡಿ.13) ಬೆಳಗ್ಗೆ ಸುವರ್ಣ ವಿಧಾನ ಸೌಧದ ಅಧಿವೇಶನದಲ್ಲಿ ಮಂಡಿಸಿದ್ದಾರೆ. ನಿನ್ನೆಯಂತೆ ವಿಪಕ್ಷಗಳು ವಿಧೇಯಕ ಮಂಡನೆ ಖಂಡಿಸಿ ಸದನದಿಂದ ಹೊರ ನಡೆದಿದ್ದಾರೆ.
ಸದನದಿಂದ ಹೊರ ಬಂದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ಕಲಾಪ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಇಲ್ಲಿ ಆತುರಾತುರವಾಗಿ ತಮಗೆ ಬೇಕಾದ ವಿಧೇಯಕಗಳನ್ನು ಮಂಡಿಸುತ್ತಿದ್ದಾರೆ.
ಸದನದಲ್ಲಿ ಬಹುಮತ ಇರುವುದರಿಂದ ಎಲ್ಲಾ ವಿಧೇಯಕಗಳನ್ನು ಪಾಸ್ ಮಾಡಿಕೊಳ್ಳುತ್ತಾರೆ. ಯಾವುದೇ ವಿಧೇಯಕದ ಬಗ್ಗೆ ಚರ್ಚೆ ನಡೆಸದೆ ಸದನದ ಕಲಾಪವನ್ನು ಮುಕ್ತಾಯಗೊಳಿಸುವುದು ಎಷ್ಟು ಸರಿ. ನಾಳೆ ಕೂಡಾ ಕಲಾಪ ಮುಂದುವರೆಸುವಂತೆ ಕೇಳಿಕೊಳ್ಳಲಾಗಿದೆ. ಆದರೆ, ಆಡಳಿತ ಪಕ್ಷಕ್ಕೆ ಕಲಾಪ ಮುಂದುವರೆಯುವುದು ಬೇಕಿಲ್ಲ.

ನಂಜುಡಪ್ಪ ವರದಿ, ಕೃಷ್ಣಾ ಕೊಳ್ಳದ ಸಮಸ್ಯೆ, ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಅಸಲಿಗೆ CAG ವರದಿ ಬಂದ ಮೇಲೆ ಸದನದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಬಿಜೆಪಿ ಸರ್ಕಾರಕ್ಕೆ ಇದೆಲ್ಲ ಬೇಕಿಲ್ಲ. ಅದಕ್ಕೆ ನಾವು ಹೊರ ನಡೆದು ಬಂದಿದ್ದೇವೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಗೋಹತ್ಯೆ ವಿಧೇಯಕ ಗದ್ದಲ: ವಿಧೇಯಕದ ಬಗ್ಗೆ ಚರ್ಚೆ ಆಗುವ ಮುನ್ನವೇ ಅದರ ಪ್ರತಿ ಹರಿದು ಹಾಕಿ ವಿರೋಧ ವ್ಯಕ್ತಪಡಿಸಿದ ಘಟನೆ ಬೆಳಗಾವಿಯ ಸುವರ್ಣ ವಿಧಾನಸೌಧ ಬುಧವಾರ ನಡೆದಿತ್ತು. ವಿರೋಧ ಪಕ್ಷಗಳ ಈ ತೀರ್ಮಾಣಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಸಚಿವ ಸುರೇಶ್‌ಕುಮಾರ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಈ ವಿಧೇಯಕ ಮಂಡನೆಯಾಗಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಈ ವಿಧೇಯಕ ಜಾರಿಗೆ ತರುತ್ತಿದೆ ಎಂಬ ಒಂದೇ ಕಾರಣಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದರು.
ಗೋವುಗಳ ರಕ್ಷಣೆಗೆ ಮುಂದಾದ ಸರ್ಕಾರದ ಕ್ರಮ ವಿರೋಧಿಸುವ ಕಾಂಗ್ರೆಸ್- ಜೆಡಿಎಸ್ ಸದಸ್ಯರು ಗೋವುಗಳ ವಿರೋಧಿಗಳು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ. ಯಾರು ಎಷ್ಟೇ ವಿರೋಧ ಮಾಡಿದರೂ, ಬಿಜೆಪಿ ಸರ್ಕಾರ ಈ ಮಸೂದೆಯನ್ನು ಯಾರಿಗೆ ತರಲಿದೆ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.
ಮಸೂದೆಯಲ್ಲಿ ಗೊಂದಲ : ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸರ್ಕಾರ ಜಾರಿಗೆ ತರಲಿರುವ ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ಹಲವಾರು ಗೊಂದಲಗಳಿವೆ. ಇಂಗ್ಲೀಷ್ ಪ್ರತಿಯಲ್ಲಿ 2012 ಎಂದಿದೆ. ಕನ್ನಡದ ಪ್ರತಿಯಲ್ಲಿ 2011 ಇದೆ. ಅಲ್ಲದೇ ಈ ಹಿಂದೆ ಗೋಹತ್ಯೆ ನಿಷೇಧ ಕಾಯಿದೆಯನ್ನು ಏಕಪಕ್ಷೀಯವಾಗಿ ಮಂಡಿಸಿ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು.
ರಾಷ್ಟ್ರಪತಿಗಳು ಈ ಮಸೂದೆಗೆ ಇನ್ನೂ ಅನುಮೋದನೆ ನೀಡಿಲ್ಲ. ಹಾಗಿದ್ದಾಗ ಈಗ ಮತ್ತೊಂದು ಮಸೂದೆ ಜರಿಗೆ ತರಲು ಬರುವುದಿಲ್ಲ ಎಂದು ನಮೂದಿಸಲಾಗಿದೆ. ಮಂಡನೆಯಾಗದ ಮಸೂದೆಗೆ ಹೇಗೆ ತಿದ್ದುಪಡಿ ತರುತ್ತೀರಿ ಎಂದು ಪ್ರಶ್ನಿಸಿದರು.
ವಿಧೇಯಕದಲ್ಲಿ ಬದಲಾವಣೆ: ಕರ್ನಾಟಕ ಗೋ ಹತ್ಯೆ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ 2010ರ ಅನುಗುಣದಂತೆ ಹಸು, ಎತ್ತೆ, ಕೋಣ ಸೇರಿದಂತೆ ರಾಸುಗಳ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿತ್ತು. ಆರೋಪಿಗಳಿಗೆ ಜಾಮೀನು ರಹಿತ ಸಜೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಇದರಲ್ಲಿ ಸಣ್ಣ ತಿದ್ದುಪಡಿ ತಂದಿದ್ದು ಕಾಯ್ದೆಯಲ್ಲಿನ ಸೆಕ್ಷನ್ (2) ರಲ್ಲಿನ ಗೋವು ಉಲ್ಲೇಖ ಆದ ಮೇಲೆ ಸೆಕ್ಷನ್ (2) ಬಿ ಯಲ್ಲಿ ಬುಲ್ ಮತ್ತು ಬುಲಕ್ ಎಂದು ಸೇರಿಸಲು ಈ ಹಿಂದಿನ ಸದಾನಂದ ಗೌಡ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು.
ವಿಧಾನಮಂಡಲದ ಎರಡೂ ಸದನಗಳಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ವಿಧೇಯಕ್ಕೆ ಅಂಕಿತ ಹಾಕುವ ಬದಲಿಗೆ ವಿಧೇಯಕವನ್ನು ರಾಷ್ಟ್ರಪತಿ ಗಳಿಗೆ ರವಾನಿಸಿದ್ದರು.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ, ಕರ್ನಾಟಕ ಪ್ರಾಣಿ ವಧೆ ನಿರ್ಮೂಲನ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕದ ವ್ಯಾಪ್ತಿ ಯಿಂದ ಎಮ್ಮೆಗಳು, ಎಮ್ಮೆಗಳ ಕರುಗಳು ಮತ್ತು ಇತರೆ ಜಾನುವಾರುಗಳನ್ನು ಕೈಬಿಟ್ಟು ವಿಧೇಯಕಕ್ಕೆ ಸಣ್ಣ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ತಿದ್ದುಪಡಿ ಮಾಡಿ ಸರ್ಕಾರ ಮತ್ತೊಮ್ಮೆ ವಿಧೇಯಕ ಮಂಡನೆಗೆ ಮುಂದಾಗಿತ್ತು.












Click it and Unblock the Notifications