RSS ಹಿಡಿತದಲ್ಲಿರುವ BJPಗೆ ಭವಿಷ್ಯವಿಲ್ಲ: ಸಂಕೇಶ್ವರ ಬಾಂಬ್

15 ವರ್ಷದಿಂದ ಬಿಜೆಪಿಯ ಹೀನಾಯ ಸ್ಥಿತಿ ಬಲ್ಲೆ. ಅದು ಸಂಪೂರ್ಣವಾಗಿ RSS ಹಿಡಿತದಲ್ಲಿದೆ. ಅವಿವಾಹಿತ ಪಡಪೋಶಿ ಸಂಘ ಪರಿವಾರಿಗಳ ಕೈಯಲ್ಲಿ ಬಿಜೆಪಿ ನಲುಗುತ್ತಿದೆ.
ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಹೆಸರಿನಲ್ಲಿ 36 ಬೇನಾಮಿ ಕಂಪನಿಗಳು ಇದ್ದರೂ ಅವರ ವಿರುದ್ಧ ಯಾವೊದೇ ಕ್ರಮ ಕೈಗೊಂಡಿಲ್ಲ. ಇದು ಅತ್ಯಂತ ಬೇಸರದ ಸಂಗತಿ. ನನ್ನಂತಹ ಪ್ರಮಾಣಿಕನಿಗೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.
ಮಾಜಿ ಸಿಎಂ ಯಡಿಯೂರಪ್ಪ ಅವರ KJP ಜತೆ ನಾನು ಗುರುತಿಸಿಕೊಂಡಿರುವುದು ನಿಜ. ಆದರೆ ನನ್ನದೇ ಆದ ಆದರ್ಶಗಳೊಂದಿಗೆ ರಾಜಕೀಯದಲ್ಲಿ ಮುನ್ನಡೆಯುತ್ತೇನೆ.
ಹತ್ತಾರು ವರ್ಷಗಳಿಂದ RSS ಆಟಗಳನ್ನು ಹತ್ತಿರದಿಂದ ಬಲ್ಲೆ. ಯಡಿಯೂರಪ್ಪನವರಿಗೂ ಇದೆಲ್ಲ ಗೊತ್ತಿದೆ. ನಮ್ಮದೇ ಆದ ರಾಜ್ಯಕ್ಕೆ ಆದ್ಯತೆ ದೊರೆಯುವಂತೆ ಪ್ರಾದೇಶಿಕ ಪಕ್ಷದ ಸ್ಥಾಪನೆ ಅತ್ಯಗತ್ಯವಾಗಿದೆ ಎಂದು ಅವರಿಗೆ ಮನದಟ್ಟುಪಡಿಸಿದೆ. ಹಾಗಾಗಿ ಇಬ್ಬರೂ ಮಾತನಾಡಿಕೊಂಡೇ ಬಿಜೆಪಿಯಿಂದ ಹೊರಬಂದೆವು.
ಬಿಜೆಪಿಗೆ ಭವಿಷ್ಯವಿಲ್ಲ: RSS ಹಿಡಿತ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಜೆಪಿಗೆ ಭವಿಷ್ಯವಿಲ್ಲ. ಕಾರ್ಪೊರೇಶನ್ ಟಿಕೆಟ್ ಗೂ RSS ಸಮ್ಮತಿ ನೀಡಬೇಕು. ಅಂತಹ ಪರಿಸ್ಥಿತಿ ಉದ್ಭವಿಸಿದೆ.
RSS ಮಾಧ್ಯಮಗಳಲ್ಲಿ ತನ್ನ ವಿಚಾರ/ನಿರ್ಣಯಗಳನ್ನು ಬಹಿರಂಗಪಡಿಸಬೇಕು. ತೆರೆಮರೆಯ ಆಟ ಆಡುವುದು ಸರಿಯಿಲ್ಲ. ಇದರಿಂದ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಬರುತ್ತಿದೆ. RSSನಿಂದ ಬಿಜೆಪಿ ಪಕ್ಷ ಹಾಳಾಗುತ್ತಿದೆ ಎಂದು ಸುದರ್ಶನ್ ಜೀ ಖುದ್ದಾಗಿ ಅವರಿಗೇ ಹೇಳಿದ್ದೆ.
ವಿಜಯ ಸಂಕೇಶ್ವರ ಕದ್ದುಮುಚ್ಚಿ ರಾಜೀನಾಮೆ: ವಿಜಯ ಸಂಕೇಶ್ವರ್ ಅವರು BJP/RSS ವಿರುದ್ಧ ನೇರ ವಾಗ್ದಾಳಿ ನಡೆಸಿರುವುದನ್ನು ಇನ್ನೂ ಕೇಳಿಸಿಕೊಳ್ಳದ ಮಾಜಿ ಸಿಎಂ ಸದಾನಂದ ಗೌಡರು ಸಂಕೇಶ್ವರ ರಾಜೀನಾಮೆ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
'ವಿಜಯ ಸಂಕೇಶ್ವರ್ ಅವರು ಕದ್ದುಮುಚ್ಚಿ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. BJP ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಅವರು ರಾಜೀನಾಮೆ ನೀಡಿರುವ ರೀತಿ ತುಂಬಾ ಬೇಸರ ತಂದಿದೆ. ಆದರೂ ಅವರು ಹೀಗೇಕೆ ಮಾಡಿದರೋ?' ಎಂದು ಸದಾನಂದರು ಹೇಳಿದ್ದಾರೆ.
'ಪಕ್ಷ ಅಶಿಸ್ತನ್ನು ಸಹಿಸುವುದಿಲ್ಲ. ಅಶಿಸ್ತು ತೋರುವ ನಾಯಕರನ್ನು ಒಂದೇ ಪಾತ್ರೆಯಲ್ಲಿ ಸೌಟಿನಿಂದ ತಿರುವು ಹಾಕುತ್ತೇವೆ' ಎಂದೂ ಸದಾನಂದರು ಫರ್ಮಾನು ಹೊರಡಿಸಿದ್ದಾರೆ.












Click it and Unblock the Notifications