ಕೋಲ್ಕತಾ ಕಾಮನಬಿಲ್ಲು ಹಬ್ಬದಲ್ಲಿ ಕಟ್ಟಿದ ಕಮಾನು
ಕೋಲ್ಕತಾ, ಡಿ. 10 : ಡಿಸೆಂಬರ್ 10 ಮಾನವ ಹಕ್ಕುಗಳ ದಿನಾಚರಣೆ. ಆದರೆ, ಸಮಾಜದಲ್ಲಿ ದುರ್ಲಭವಾಗಿರುವ ಸಮಾನ ಸ್ಥಾನಮಾನದ ಹಕ್ಕಿಗಾಗಿ ಲೈಂಗಿಕ ಅಲ್ಪಸಂಖ್ಯಾತರು ನಡೆಸುತ್ತಿರುವ ಹೋರಾಟಕ್ಕೆ ಇನ್ನೂ ಬೆಲೆ ಸಿಕ್ಕಿಲ್ಲ. ಸಮಾಜದಲ್ಲಿ ಈ ಸಮುದಾಯದವರು ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ.
ಈ ನಿಟ್ಟಿನಲ್ಲಿ ಡಿ.9ರಂದು ಕೋಲ್ಕತಾದಲ್ಲಿ ನಡೆದ ಎಲ್‌ಜಿಬಿಟಿ (lesbian, gay, bisexual and transgender) ಸಮುದಾಯದವರು ನಡೆಸಿದ 'ರೈನ್‌ಬೋ ಕಾರ್ನಿವಾಲ್' ಅವರು ತಮ್ಮ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಭಾರೀ ಇಂಬು ನೀಡಿದೆ.
ಈ ಕಾಮನಬಿಲ್ಲು ಹಬ್ಬವನ್ನು ಆಯೋಜಿಸಿದ್ದು ಸಾಪ್ಪೋ ಫಾರ್ ಇಕ್ವಾಲಿಟಿ ಸಂಘಟನೆಯ ಸಹ-ಸಂಸ್ಥಾಪಕಿ ಆಕಾಂಕ್ಷಾ ಅವರು, "ಬೆಂಗಳೂರಿಗಿಂತ ಕೋಲ್ಕತಾದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಕೋಲ್ಕತಾದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಎಚ್ಐವಿಯ ಕಾರಣವೊಡ್ಡಿ ದೂರ ಇಡಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
2009ರವರೆಗೆ ಸಲಿಂಗಕಾಮವನ್ನು ಭಾರತೀಯ ದಂಡ ಸಂಹಿತೆ ಕಾಯ್ದೆಯ 377ನೇ ಸೆಕ್ಷನ್ ಪ್ರಕಾರ ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಆದರೆ, 2010ರಲ್ಲಿ ದೆಹಲಿ ಹೈಕೋರ್ಟ್ ಹೊರಡಿಸಿದ ಐತಿಹಾಸಿಕ ತೀರ್ಪಿನಿಂದಾಗಿ ಈ ಕಳಂಕ ದೂರವಾಗಿದೆ. ಸಲಿಂಗಕಾಮದ ವಿರುದ್ಧ ಹೇರಲಾಗುವ ನಿರ್ಬಂಧನೆಯನ್ನು ಭಾರತದ ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಲಾಗಿದೆ.
ಬೆಂಗಳೂರಿನಂಥ ನಗರಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ತಮಗೆ ನೀಡಲಾಗಿರುವ ಸವಲತ್ತುಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಮತ್ತು ಸಮಾಜಕ್ಕೆ ಧಕ್ಕೆ ತರುವಂತಹ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ. ಕೆಲವರು ಮಾಡುತ್ತಿರುವ ಇಂತಹ ಸಮಾಜಘಾತುಕ ಕಾರ್ಯದಿಂದಾಗಿ ಇತರರಿಗೂ ಕೆಟ್ಟಹೆಸರು ಬರುತ್ತಿದೆ ಎಂಬ ಅಭಿಪ್ರಾಯ ಮೂಡಿದೆ.

ನನ್ನ ವ್ಯಕ್ತಿತ್ವದ ಬಗ್ಗೆ ನನಗೆ ಹೆಮ್ಮೆಯಿದೆ
ರೈನ್‌ಬೋ ಕಾರ್ನಿವಾಲ್‌ನಲ್ಲಿ ಭಾಗವಹಿಸಿದ ಅನೇಕ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ವ್ಯಕ್ತಿತ್ವದ ಬಗ್ಗೆ ತಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ತಮ್ಮ ವ್ಯಕ್ತಿತ್ವವನ್ನು ಸಮಾಜದ ಇತರರೂ ಗೌರವಿಸಬೇಕು ಮತ್ತು ಸಮಾಜದಲ್ಲಿ ತಮಗೂ ಸ್ಥಾನ ಕಲ್ಪಿಸಿಕೊಡಬೇಕು ಎಂದು ಕೇಳುತ್ತಿದ್ದಾರೆ.

ಭಾಷಣಗಳ ಜೊತೆ ಮಸ್ತ್ ಮೋಜು ಮಜಾ
ಕೋಲ್ಕತಾದಲ್ಲಿ ಡಿ. 9ರಂದು ನಡೆದ ಕಾಮನಬಿಲ್ಲು ಹಬ್ಬದಲ್ಲಿ ಸಾಕಷ್ಟು ವಿಚಾರ ವಿನಿಮಯಗಳ ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ನಾನಾ ಬಗೆಯ ಆಟಗಳನ್ನು ಆಯೋಜಿಸಲಾಗಿತ್ತು.

ಬೆಂಗಳೂರಿನಲ್ಲಿ ನಡೆಯಿತು ಕ್ವೀರ್ ಹಬ್ಬ
ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಕೂಡ ಕರ್ನಾಟಕ ಕ್ವೀರ್ ಹಬ್ಬ 2012 ನಡೆಯಿತು. ನೂರಾರು ಲೈಂಗಿಕ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿ ವಿಶಿಷ್ಟ ಬಗೆಯ ದಿರಿಸುಗಳನ್ನು ಧರಿಸಿ ತಮ್ಮ ಅಸ್ವಿತ್ವವನ್ನು ತೋರಿದರು.

ವಿಭಿನ್ನತೆಯಲ್ಲೂ ಏಕತೆ ಮೆರೆದರು
ಬೆಂಗಳೂರಿನಲ್ಲಿ ನಡೆದ ಅಲ್ಪಸಂಖ್ಯಾತರ ಕ್ವೀರ್ ಹಬ್ಬದಲ್ಲಿ ನಾನಾ ಬಣ್ಣಗಳಿಂದ ಕೂಡಿದ ಬೃಹತ್ ವಸ್ತ್ರವನ್ನು ಪ್ರದರ್ಶಿಸಿ, ವಿಭಿನ್ನತೆಯಲ್ಲೂ ಏಕತೆಯಿಂದ ಇರುವುದಾಗಿ ಲೈಂಗಿಕ ಅಲ್ಪಸಂಖ್ಯಾತರು ಬಿಂಬಿಸಿಕೊಂಡರು. ಸಾರ್ವಜನಿಕರಿಂದ ಕೂಡ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕಮಾನು ಕಟ್ಟಿದ ಕಾಮನಬಿಲ್ಲು
ಕೋಲ್ಕತಾದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಮುಖದ ಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸಿ ಸಂತೋಷಪಟ್ಟರು. ಕಾಮನಬಿಲ್ಲು ಎಲ್ಲೆಲ್ಲೂ ಕಮಾನು ಕಟ್ಟಿತ್ತು.

ನಾನೇ ರಾಜ ನೀನೇ ರಾಣಿ
ಕೋಲ್ಕತಾದಲ್ಲಿ ನಡೆದ ಕಾಮನಬಿಲ್ಲು ಹಬ್ಬದಲ್ಲಿ ಭಾಗವಹಿಸಿದ ಸದಸ್ಯರು ವಿಚಿತ್ರ ವಿಭಿನ್ನ ವೇಷ ಧರಿಸಿ ಖುಷಿಯಿಂದ ಮೆರೆದಾಡಿದರು. ನಾನೇ ರಾಜ, ನೀನೇ ರಾಣಿ, ನಮ್ಮ ಸಾಮ್ರಾಜ್ಯಕ್ಕೆ ನಾವೇ ಅಧಿಪತಿಗಳು ಎಂದು ಮೆರೆದಾಡಿದರು.

ಹೇಗಿದೆ ಈ ಪೋಸ್?
ದೆಹಲಿಯಲ್ಲಿ ಡಿ.9ರಂದು ನಡೆದ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಬಣ್ಣಬಣ್ಣದ ಬಲೂನುಗಳನ್ನು ಹಿಡಿದು ಹೇಗೆ ಕಾಣ್ತಿದ್ದೀನಿ ಎಂದು ಪೋಸ್ ನೀಡುತ್ತಿರುವ ವ್ಯಕ್ತಿ.











Click it and Unblock the Notifications