ಸುವರ್ಣಸೌಧ ಮೊಗಸಾಲೆಯಲ್ಲಿ ಬಿಎಸ್‌ವೈ ಭರ್ಜರಿ ಶೋ

ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಕಾಣಿಸಿಕೊಂಡಿರುವ ಅವರು ಭರ್ಜರಿ ಶೋ ನೀಡಿದ್ದಾರೆ. ಬಿಜೆಪಿಯನ್ನು ಮುಟ್ಟಬೇಡಿ ಎಂದು ಈಶ್ವರಪ್ಪ ಹೇಳಿರುವಾಗಲೇ ಯಡಿಯೂರಪ್ಪ ವಿಧಾನಸೌಧದೊಳಕ್ಕೆ ನುಗ್ಗಿ, ಕೆಜೆಪಿ ಸಮಾವೇಶಕ್ಕೆ ತಯಾರಿ ನಡೆಸಿರುವುದು ಕುತೂಹಲಕಾರಿಯಾಗಿದೆ.
ಬೆಳಗ್ಗೆಯ ಸುದ್ದಿ: ಕೆಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವ ಧಾವಂತದಲ್ಲಿರುವ ಬಿಎಸ್ ಯಡಿಯೂರಪ್ಪ ಅವರು ನಿರೀಕ್ಷೆಯಂತೆ ಇಂದು ಬೆಳಗ್ಗೆ ಬೆಳಗಾವಿ ತಲುಪಿಕೊಂಡಿದ್ದಾರೆ. ಸಚಿವ ಉದಾಸಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಯಡಿಯೂರಪ್ಪಗೆ ಸ್ವಾಗತ ಕೋರಿದ್ದಾರೆ.
ವಿಮಾನ ನಿಲ್ದಾಣ ರಸ್ತೆಯಲ್ಲೇ ಇರುವ Sankam Residency ಹೋಟೆಲ್ ತಲುಪಿಕೊಂಡ ಯಡಿಯೂರಪ್ಪ ಅವರನ್ನು ಇನ್ನೂ ಹೆಚ್ಚಿನ ಸಂಖ್ಯೆಯ ಶಾಸಕರು/ಸಚಿವರು/ಮೇಲ್ಮನೆ ಸದಸ್ಯರು ಭೇಟಿಯಾಗಿದ್ದಾರೆ.
ಶೋಭಾ ಕರಂದ್ಲಾಜೆ, ಉಮೇಶ್ ಕತ್ತಿ, ಸಿಸಿ ಪಾಟೀಲ್, ರೇಣುಕಾಚಾರ್ಯ, ಪುಟ್ಟಸ್ವಾಮಿ, ನಿರಾಣಿ, ಹಾಲಪ್ಪ ಸೇರಿದಂತೆ 10 ಸಂಸದರು/ 35 ಸಚಿವ/ಶಾಸಕರು ಯಡಿಯೂರಪ್ಪ ಅವರನ್ನು ಕಂಡು ಮಾತನಾಡಿಸಿದ್ದಾರೆ.
ವಿಜಯ ಸಂಕೇಶ್ವರ್ ಭೇಟಿ: ಗಮನಾರ್ಹವೆಂದರೆ ಜಗದೀಶ್ ಶೆಟ್ಟರ್ ಅವರ ತವರೂರಿನವರೇ ಆದ ಹುಬ್ಬಳ್ಳಿಯ ಉದ್ಯಮಿ, ಬಿಜೆಪಿಯ ಮೇಲ್ಮನೆ ಸದಸ್ಯ, ಪತ್ರಿಕೋದ್ಯಮಿ ವಿಜಯ್ ಸಂಕೇಶ್ವರ್ ಅವರು ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ. ಹೋಟೆಲ್ ಸಂಕಂನಲ್ಲಿ ಯಡಿಯೂರಪ್ಪ ಆಯೋಜಿಸಿರುವ ಉಪಾಹಾರ ಕೂಟದಲ್ಲಿ ಈ ನಾಯಕರೆಲ್ಲ ಪಾಲ್ಗೊಂಡಿದ್ದಾರೆ.
ಹೋಟೆಲ್ ಎದುರು ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಕರ್ನಾಟಕ ಜನತಾ ಪಕ್ಷದ ಹಾವೇರಿ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಯಾವುದೇ ಶಾಸಕ/ಸಚಿವರನ್ನು ಖುದ್ದಾಗಿ ಕರೆದಿಲ್ಲ. ಆದರೆ ಯಾರನ್ನೂ ನಾನು ತಡೆಯುವ ಹಾಗಿಲ್ಲ. ಅವರೆಲ್ಲ ಬಂದರೆ ನಾನು ಹೇಗೆ ಬೇಡ ಎನ್ನಲಿ ಎಂದಿದ್ದಾರೆ.
ಈ ಮಧ್ಯೆ ಕಾವೇರಿ ನೀರು ಬಿಟ್ಟಿರುವ ಬಗ್ಗೆ ಸಿಎಂ ಶೆಟ್ಟರ್ ಅವರಿಗೆ ಕಿವಿಮಾತು ಹೇಳಿದ ಯಡಿಯೂರಪ್ಪ, ಕಾವೇರಿ ನಮ್ಮ ರೈತರ ಜೀವನಾಡಿ. ಅದು ಅತ್ಯಂತ ಸೂಕ್ಷ್ಮ ವಿಚಾರ. ಹಾಗಾಗಿ ಎಚ್ಚರಿಕೆಯ ನಡೆ ಹಾಕಬೇಕು ಎಂದು ಹೇಳಿದ್ದಾರೆ.












Click it and Unblock the Notifications