ಶಿಕ್ಷಕಿ ಕಿರುಕುಳ, ವಿದ್ಯಾರ್ಥಿ ಆತ್ಮಹತ್ಯೆ ಯತ್ನ

ಇಲ್ಲಿನ ಇಂಡಿ ರಸ್ತೆಯಲ್ಲಿರುವ ನೀಲಕಂಠೇಶ್ವರ ವಿದ್ಯಾಮಂದಿರದಲ್ಲಿ ನಡೆದ ಆತ್ಮಹತ್ಯೆ ಯತ್ನ ಕಂಡು ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಬೆಚ್ಚಿದ್ದಾರೆ.
ಶಿಕ್ಷಕಿಯೊಬ್ಬಳ ಕಿರುಕುಳ ತಾಳಲಾರದೆ 4ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದಾನೆ.
ಶಿಕ್ಷಕಿ ರಾಧಿಕಾ ರಜಪೂತ್ ಅವರ ಶಿಕ್ಷೆ ಸಹಿಸಿಕೊಳ್ಳಲಾಗದೆ ಪ್ರಮೋದ್ ಅಜಯ್ ಜಾಧವ್ ಎಂಬ ವಿದ್ಯಾರ್ಥಿ ತುಂಬಾ ನೊಂದಿದೆ. ಹಲವು ದಿನಗಳಿಂದ ಶಿಕ್ಷಕಿ ಶಿಕ್ಷೆ ಸಹಿಸಲು ಇನ್ನು ಸಾಧ್ಯವಿಲ್ಲ ಎಂದು ಸ್ನೇಹಿತರ ಬಳಿ ಗೋಳು ತೋಡಿಕೊಂಡಿದ್ದ.
ಬುಧವಾರ ಶಾಲಾ ಆವರಣದಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
10 ವರ್ಷದ ಬಾಲಕ ಈ ರೀತಿ ಏಕಾಏಕಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಶಾಲಾ ಆವರಣದಲ್ಲಿ ಗಲಭೆ ಗದ್ದಲ ಎದ್ದಿತ್ತು. ಬೆಂಕಿ ಹಚ್ಚಿಕೊಂಡ ಬಾಲಕನನ್ನು ರಕ್ಷಿಸಿ ಸಮೀಪದ ಸಿವಿಎಲ್ ಆಸ್ಪತೆಗೆ ದಾಖಲಿಸಲಾಗಿದೆ. ಬಾಲಕನ ಆರೋಗ್ಯದ ಸ್ಥಿತಿ ಗತಿ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.
ಬಾಲಕ ಅಜಯ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಶೇ 40 ರಿಂದ 50 ರಷ್ಟು ಸುಟ್ಟಗಾಯಗಳಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಎಲ್‌ಕೆಜಿ ಓದುತ್ತಿರುವ ನಾಲ್ಕು ವರ್ಷದ ಪುಟಾಣಿ ಮಗುವಿಗೆ ತನ್ನದೆ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ ಘಟನೆ ನಡೆದಿತ್ತು. ಹೀನಾತಿಹೀನ ಶಿಕ್ಷಕಿಯ ವಿರುದ್ಧ ವಿಚಾರಣೆ ನಡೆಸಬೇಕೆಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಶಿಕ್ಷಣಾಧಿಕಾರಿ ಗುರುವಾರ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications