ಐರ್ಲೆಂಡ್: ಗರ್ಭಿಣಿ ಕನ್ನಡತಿ ಸವಿತಾ ಸಾವು, ಭುಗಿಲೆದ್ದ ಆಕ್ರೋಶ

'ನನ್ನ ಪತ್ನಿಗೆ ಗರ್ಭಸ್ರಾವವಾಗಿದ್ದು ಅತೀವ ನೋವನ್ನು ಅನುಭವಿಸುತ್ತಿದ್ದರು. ಹಾಗಾಗಿ ಗರ್ಭಪಾತ ಮಾಡಿ, ಜೀವ ಉಳಿಸಿ ಎಂದು ಮೂರು ದಿನಗಳಿಂದ ಪರಿಪರಿಯಾಗಿ ಕೇಳಿಕೊಂಡೆವು. ಆದರೆ ನಮ್ಮದು ಕ್ಯಾಥೊಲಿಕ್ ರಾಷ್ಟ್ರ. ಇಲ್ಲಿ ಗರ್ಭಪಾತ ಮಾಡಿಸದುವ ಹಾಗಿಲ್ಲ' ಎಂದು ಹೇಳಿ ನನ್ನ ಪತ್ನಿಯ ಜೀವಹರಣ ಮಾಡಿದರು ಎಂದು ಮೃತ ಸವಿತಾ ಅವರ ಪತಿ, ಪ್ರವೀಣ್ ಹಾಲಪ್ಪನವರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಹಾಲಪ್ಪನವರ್ ಅವರು ಗಾಲವೇದಲ್ಲಿರುವ ಬೋಸ್ಟನ್ ಸೈಂಟಿಫಿಕ್ ಕೇಂದ್ರದಲ್ಲಿ ಇಂಜಿನಿಯರ್ ಆಗಿದ್ದಾರೆ.
ಸವಿತಾರ ಈ ಅಮಾನವೀಯ ಸಾವಿಗೆ ಇಡೀ ಜಗತ್ತು ಮಮ್ಮಲಮರುಗಿದ್ದು, ಐರ್ಲೆಂಡಿನ ಕ್ಯಾಥೊಲಿಕ್ ಶಿಷ್ಟಾಚಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಚರ್ಚೆ: ಸವಿತಾ ಸಾವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಂಪ್ರದಾಯ ಮತ್ತು ಮಾನವೀಯತೆಯ ನಡುವಿನ ಕಂದರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಗರ್ಭಿಣಿಯರ ನರಕಯಾತನೆ ಮತ್ತು ಸಾವಿಗೆ ಕಾರಣವಾಗುತ್ತಿರುವ ಗರ್ಭಪಾತ ನಿಷೇಧದ ವಿರುದ್ಧವೂ ದೊಡ್ಡ ದನಿ ಎದ್ದಿದೆ.
ತನಿಖೆಗೆ ಆದೇಶ: ಅಲ್ಲಿನ ಆರೋಗ್ಯ ಇಲಾಖೆ ಪ್ರಕರಣದ ತನಿಖೆಗೆ ಆದೇಶಿಸಿದೆ. ಆಂತರಿಕ ತನಿಖೆಗೂ ಆದೇಶ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬೇರೆಯವರಿಗೆ ಹೀಗಾಬಾರದೆಂದು ಪ್ರವೀಣ್ ಕುಟುಂಬವು ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.
ವೈದ್ಯರು ನೀಡಿದ ಕಾರಣವೇನು?: ಸವಿತಾ ಹಾಲಪ್ಪನವರ್ ಅವರಿಗೆ ಗರ್ಭಪಾತಕ್ಕೆ ನಿರಾಕರಿಸಲು ಅಲ್ಲಿನ ವೈದ್ಯರು ನೀಡಿದ ಕಾರಣವೇನೆಂದರೆ- 'ಭ್ರೂಣ ಇನ್ನೂ ಸತ್ತಿಲ್ಲ. ಭ್ರೂಣದ ಹೃದಯ ಬಡಿಯುತ್ತಿದೆ. ಹೃದಯ ಬಡಿತ ನಿಂತ ಬಳಿಕವಷ್ಟೇ ಗರ್ಭಪಾತ ಮಾಡಬಹುದು. ಕ್ಯಾಥೋಲಿಕ್ ಸಂಪ್ರದಾಯದ ಈ ದೇಶದಲ್ಲಿ ಇದುವೇ ಶಿಷ್ಟಾಚಾರ. ಇಲ್ಲಿ ಗರ್ಭಪಾತಕ್ಕೆ ಅವಕಾಶವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ನಿಯ ನರಕಯಾತನೆ ನೋಡಲಾಗದ ಪ್ರವೀಣ್, ವೈದ್ಯರ ಕಾಲಿಗೆ ಬಿದ್ದು ಪ್ರಾಣ ಉಳಿಸುವಂತೆ ಬೇಡಿಕೊಂಡಿರೂ ಅವರ ಮೊರೆ ದೇವರಿಗೂ ಕೇಳಿಸಿಲ್ಲ.
ಯಾತನಾಮಯ ಸಾವು: 'ನಾನು ಕ್ಯಾಥೋಲಿಕ್ ಅಲ್ಲ, ಐರ್ಲೆಂಡ್‌ನವಳೂ ಅಲ್ಲ. ದಯಮಾಡಿ ಮಗುವನ್ನು ಹೊರ ತೆಗೆದುಬಿಡಿ' ಎಂದು ಸ್ವತಃ ಸವಿತಾ ಕೇಳಿಕೊಂಡರೂ, 'ಭ್ರೂಣದ ಎದೆಬಡಿತ ಇನ್ನೂ ಜಾರಿಯಲ್ಲಿದೆ. ಅದು ನಿಲ್ಲುವವರೆಗೂ ನಾವು ಏನೂ ಮಾಡುವ ಹಾಗಿಲ್ಲ' ಎಂದು ವೈದ್ಯರು ಕೈಚೆಲ್ಲಿದ್ದಾರೆ.
ಭ್ರೂಣ ಸಾಯುವವರೆಗೂ ರಕ್ತಸ್ರಾವದ ಮಧ್ಯೆ ಯಾತನಾಮಯ ಸ್ಥಿತಿಯಲ್ಲೇ ಸವಿತಾ ಎರಡೂವರೆ ದಿನ ನರಳಿದರು. ಆ ನಂತರವಷ್ಟೇ ವೈದ್ಯರು ಸತ್ತ ಮಗುವನ್ನು ಹೊರತೆಗೆದರು. ಅಷ್ಟರಲ್ಲಾಗಲೇ ಅರೆಜೀವವಾಗಿದ್ದ ಸವಿತಾ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು.
ಆದರೆ ತೀವ್ರ ರಕ್ತಸ್ರಾವದಿಂದ ಮಾರಣಾಂತಿಕ ಸೋಂಕು 'ಸೆಪ್ಟಿಸೀಮಿಯಾ' (septicaemia) ತಗುಲಿ ಅವರು ಮೃತಪಟ್ಟರು. ಸವಿತಾ ಅವರ ದೇಹವನ್ನು ನ. 1ರಂದು ಬೆಳಗಾವಿಗೆ ತಂದು ಶವಸಂಸ್ಕಾರ ನಡೆಸಲಾಯಿತು.
ಗರ್ಭಪಾತಕ್ಕೆ ನಿಷೇಧ: 1861ರ ಕಾಯಿದೆ ಪ್ರಕಾರ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ನಿಷೇಧವಿದೆ. ಭ್ರೂಣ ಸತ್ತಿದೆ ಎಂದು ಖಚಿತವಾಗುವವರೆಗೂ ಶಸ್ತ್ರಚಿಕಿತ್ಸೆ ನಡೆಸುವ ಹಾಗಿಲ್ಲ. ಸಂಪ್ರದಾಯವಾದಿ ಕ್ಯಾಥೋಲಿಕ್ ಧಾರ್ಮಿಕ ನಂಬಿಕೆಯನ್ನು ಆಧರಿಸಿದ ಈ ಕಾನೂನಿಗೆ ತಿದ್ದುಪಡಿ ತರಬೇಕೆಂಬ ಕೂಗು ಹಿಂದಿನಿಂದಲೂ ಇದೆ. 1992ರಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳ ಗರ್ಭಪಾತಕ್ಕೆ ಅವಕಾಶ ನೀಡದ ಕಾನೂನಿನ ಕುರಿತು ಮತ್ತೊಮ್ಮೆ ಚರ್ಚೆಯಾಗಿತ್ತು.
ಗರ್ಭಪಾತಕ್ಕೆ ಈಡಾಗಿ ಇಲ್ಲಿ ಅಸಂಖ್ಯಾ ಮಹಿಳೆಯರು ಸಾಯುತ್ತಿರುವುದರಿಂದ ನಿಷೇಧಕ್ಕೆ ತಿದ್ದುಪಡಿ ತರಬೇಕೆಂದು ಯುರೋಪ್ ಕೋರ್ಟ್ 2009ರಲ್ಲಿ ಆದೇಶಿಸಿತ್ತು. ಆದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಧಾರ್ಮಿಕ ನಂಬಿಕೆಗಳ ಅಂಧ ಅನುಕರಣೆಯಿಂದ ಈ ಕಾನೂನು ಇನ್ನೂ ಚಾಲ್ತಿಯಲ್ಲಿದೆ.
ಆದರೂ ಸವಿತಾ ಅವರ ಕ್ರೂರ ಸಾವಿನ ನಂತರ ಅಲ್ಲಿನ ಆರೋಗ್ಯ ಸಚಿವ ಜೇಮ್ಸ್ ರೀಲಿ ಅವರು ದೇಶದಲ್ಲಿನ ಗರ್ಭಿಣಿ ಸಾವುಗಳ ಅಂಕಿಸಂಖ್ಯೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕಾಯಿದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಅವರು ತಜ್ಞರ ಸಲಹೆ ಪಡೆಯುತ್ತಿದ್ದಾರೆ.












Click it and Unblock the Notifications