ಚೆನ್ನೈ: ಋತುಮತಿಗೆ ಶಿಕ್ಷಣ ಪಡೆಯುವ ಹಕ್ಕಿಲ್ಲ!

ಋತುಮತಿಯಾದ ಹೆಣ್ಣು ಶಿಕ್ಷಣಕ್ಕೆ ಅರ್ಹಳಲ್ಲ. ಆಕೆ ಶಾಲೆಗೆ ಹೋಗಬಾರದು ಎಂದು ಪಿಆರ್ ಪಟ್ಟಿಣಂನ ಪಂಚಾಯಿತಿ ನಿರ್ಣಯ ನೀಡಿದೆ. ಅಲ್ಲದೆ, 16 ವರ್ಷದ ಹುಡುಗಿಯನ್ನು ಶಾಲೆಯಿಂದ ಬಿಡಿಸಿ, ಊರಿನಿಂದ ಹೊರಹಾಕಲಾಗಿದೆ. ಶಿಕ್ಷಣ ವಂಚಿತ ಹುಡುಗಿ ತನ್ನ ತಂದೆ ಜೊತೆ ಊರು ಹೊರಗೆ ನಿಂತು ಗ್ರಾಮಸ್ಥರ ನೆರವು ಬೇಡಿದ್ದಾಳೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.
ಆದರೆ, ಗ್ರಾಮಸ್ಥರ ಮನಸ್ಸು ಕರಗಲಿಲ್ಲದ ಕಾರಣ, ಹುಡುಗಿಯ ತಾಯಿ ಹಜಿರಾಮ್ಮಲ್ ಮಹಮ್ಮದ್(52) ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತನ್ನ ಮಗಳ ಓದಿಗೆ ನೆರವಾಗುವಂತೆ ಮನವಿ ಸಲ್ಲಿಸಿದ್ದಾರೆ.
ನನ್ನ 16 ವರ್ಷದ ಮಗಳು ಜನುಬಾ ಬೇಗಂಳನ್ನು ಬಲವಂತವಾಗಿ ಶಾಲೆಯಿಂದ ಬಿಡಿಸಿ ಊರಿನಿಂದ ಹೊರದಬ್ಬಲಾಗಿದೆ. ಜುಲೈ 2012ರಿಂದ ಮನಮೇಲ್ಕುಡಿಯ ಸರ್ಕಾರಿ ಹೈಸ್ಕೂಲ್ ನಲ್ಲಿ ನನ್ನ ಮಗಳು XI ತರಗತಿಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ಸ್ಥಳೀಯ ಪಂಚಾಯಿತಿ ಮುಖಂಡರು ಜಮಾತ್ ಸದಸ್ಯರು ಆಕೆ ಓದಿಗೆ ಅಡ್ಡಿ ಪಡಿಸಿದ್ದಾರೆ ಎಂದು ಹಜಿರಾಮ್ಮಲ್ ಅವರು ದೂರು ನೀಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಜಮಾತ್ ಸಮಿತಿ ಮೊದಲ ಬಾರಿಗೆ ಎಚ್ಚರಿಕೆ ನೀಡಿತ್ತು. ಜನುಬಾ ಬೇಗಂಳನ್ನು ಶಾಲೆ ಕಳಿಸಬಾರದು ಎಂದು ಕಟ್ಟಾಜ್ಞೆ ಹೊರಡಿಸಿತ್ತು.
ನಾನು ಜಮಾತ್ ನಿರ್ಣಯವನ್ನು ಬದಿಗೊತ್ತಿ ಮಗಳನ್ನು ಶಾಲೆಗಳಿಗೆ ಕಳಿಸಿದೆ. ಇದರಿಂದ ಕೋಪಗೊಂಡ ಜಮಾತ್ ಸದಸ್ಯರು ನನ್ನ ಗಂಡನನ್ನು ಮಸೀದಿಗೆ ಕರೆಸಿಕೊಂಡು ಚೆನ್ನಾಗಿ ಥಳಿಸಿ ಎಚ್ಚರಿಕೆ ನೀಡಿ ಕಳಿಸಿದರು.
ನನ್ನ ಮಗಳ ಸ್ಕೂಲ್ ಬ್ಯಾಗ್ ಕಿತ್ತುಕೊಂಡು ಆಕೆ ಶಾಲೆಯಿಂದ ಟಿಸಿ ಪಡೆದು ಹೊರಬಿದ್ದ ನಂತರವೇ ಬ್ಯಾಗ್ ನೀಡುತ್ತೇವೆ ಎಂದು ಹೆದರಿಸಿದರು. ಸೆಪ್ಟೆಂಬರ್ ಮೊದಲ ವಾರದೊಳಗೆ ನಿನ್ನ ಮಗಳನ್ನು ಶಾಲೆ ಬಿಡಿಸಿ ಟಿಸಿ ಪ್ರತಿ ನಮ್ಮ ಕೈಗೆ ನೀಡಬೇಕು ಎಂದು ಜಮಾತ್ ಸದಸ್ಯರು ನನ್ನ ಗಂಡ ನಲ್ಲ ಮಹಮ್ಮದ್ ಗೆ ಎಚ್ಚರಿಕೆ ನೀಡಿದ್ದರು.
ಜಮಾತ್ ಬೆದರಿಕೆಗೆ ಹೆದರಿ ನನ್ನ ಗಂಡ ಅಂದಿನಿಂದ ನಾಪತ್ತೆಯಾಗಿದ್ದಾನೆ. ಇದುವರೆವಿಗೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹಜೀರಾ ಅವರು ದೂರಿನಲ್ಲಿ ಹೇಳಿದ್ದಾರೆ.
ಶಿಕ್ಷಣ ವಂಚಿತ ಹುಡುಗಿಗೆ ಬಹಿಷ್ಕಾರದ ಬೆದರಿಕೆ ಜೊತೆಗೆ ಜಮಾತ್ ನಿಯಮಗಳನ್ನು ಧಿಕ್ಕರಿಸಿದ್ದಕ್ಕಾಗಿ 15,000 ರು ದಂಡ ವಿಧಿಸಲಾಗಿದೆ.












Click it and Unblock the Notifications