ಪಿತಾಮಹ ಎನ್ ಡಿ ತಿವಾರಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ!

ಕಾಂಗ್ರೆಸ್ಸಿನ ಈ ವಯೋವೃದ್ಧ ನಾಯಕ ರಾಜಕೀಯವಾಗಿ ತುಂಬಾ ಚಟುವಟಿಕೆಯಿಂದ ಕಾರ್ಯಮಗ್ನರಾಗಿದ್ದಾರೆ.
'ಸೆಕ್ಸ್ ಸ್ಕ್ಯಾಂಡೆಲ್'ನಲ್ಲಿ ಮುಳುಗಿ ಆಂಧ್ರಪ್ರದೇಶದ ರಾಜಭವನದಿಂದ ಹೊರಬಿದ್ದ ನಂತರ ತಿವಾರಿ ವೈಯಕ್ತಿಕ ನೆಲೆಯಲ್ಲಿ ಭಾರಿ ಮುಜುಗರ/ಸೋಲನ್ನು ಅನುಭವಿಸಿದ್ದರು. ಜನ್ಮ ನೀಡಿದ್ದ ಮಗನಿಗೆ ನಾನು ನಿನ್ನಪ್ಪನಲ್ಲ ಎಂದು ಗೋಳಾಡಿಸಿದ್ದರು. ಆದರೆ ಕೋರ್ಟಿನಲ್ಲೇ ಪ್ರಕರಣ ಇತ್ಯರ್ಥವಾಗಿ ತಿವಾರಿ ಸೋಲುಂಡಿದ್ದರು. ಇಂತಿಪ್ಪ ತಿವಾರಿ ಈಗ ಜನಪರ ಕಾರ್ಯಗಳಲ್ಲಿ ಮುಳುಗಿದ್ದಾರೆ.
ಉತ್ತರ ಪ್ರದೇಶದ ಈ ವಯೋವೃದ್ಧ ನಾಯಕನನ್ನು ಈಗ ಮುಲಾಯಂ ಸಿಂಗ್ ಬಿಗಿದಪ್ಪಿಕೊಂಡಿದ್ದಾರೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ತಿವಾರಿಯನ್ನು ನೇಮಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಂಪುಟದಲ್ಲಿ ವಯಸ್ಸಾದವರನ್ನು ಮನೆಗೆ ಕಳಿಸಿ, ನವಚೈತನ್ಯ ತುಂಬಿಕೊಂಡಿದ್ದ ಕಾಂಗ್ರೆಸ್ ಪಕ್ಷವು ತಿವಾರಿಗಾಗಿ ಮಣೆ ಹಾಕಿಸಿರುವುದು ಕುತೂಹಲಕಾರಿಯಾಗಿದೆ. ಇದನ್ನು ಕೇಳಿಸಿಕೊಂಡ ಕರ್ನಾಟಕದ ಕಾಂಗ್ರೆಸ್ ಮಂದಿ 'ನೋಡ್ತಿರಿ ನಮ್ಮ ಎಸ್ಎಂ ಕೃಷ್ಣ ಅವರೂ ಅಷ್ಟೇ ಮೊದಲು ಪಕ್ಷವನ್ನು ಅಧಿಕಾರಕ್ಕೆ ತಂದು, ಆ ನಂತರ ಕೇಂದ್ರವಷ್ಟೇ ಏಕೆ, ವಿದೇಶದಿಂದಲೂ (ಮಾಜಿ ವಿದೇಶಾಂಗ ಸಚಿವರಾಗಿ) ಹಣ ತಂದು ಕರ್ನಾಟಕವನ್ನು ಸುಭಿಕ್ಷ ರಾಜ್ಯವನ್ನಾಗಿಸುತ್ತಾರೆ' ಎಂದು ಹೇಳುತ್ತಿದ್ದಾರೆ.
ಮತ್ತೆ ತಿವಾಋಇ ಮಾತಿಗೆ ಬಂದರೆ... ನಿವೃತ್ತಿಯ ಮಾತೇ ಇಲ್ಲ ಎನ್ನುತ್ತಿರುವ ಅವರು ಉತ್ತರ ಪ್ರದೇಶದ ಜನತೆಗಾಗಿ ಇನ್ನೂ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. 'ತಿವಾರಿ ಅವರಿಂದ ನಾವು ಕಲಿಯುವುದು ಬಹಳಷ್ಟಿದೆ' ಎಂದು ನಗೆಯಾಡುವ ಮುಲಾಯಂ, ರಾಜ್ಯದ ಅಭಿವೃದ್ಧಿ ವಿಚಾರದ ಬಗ್ಗೆ ತಿವಾರಿ ಅವರ ಸಂಪರ್ಕದಲ್ಲಿರುವುದಾಗಿ ಹೇಳುತ್ತಾರೆ.
ಇನ್ನು ಕೇಂದ್ರದ ನಾಯಕರಾದ ನಾಗರಿಕ ವಿಮಾನ ಖಾತೆ ಸಚಿವ ಅಜಿತ್ ಸಿಂಗ್ ಅವರಿಗೆ ಪತ್ರ ಬರೆದಿರುವ ತಿವಾರಿ ಅವರು ಉತ್ತರಕಂಡಕ್ಕೆ ತಕ್ಷಣ ಹೆಚ್ಚಿನ ವಿಮಾನ ಸಂಚಾರಗಳನ್ನು ಕಲ್ಪಿಸಬೇಕು ಎಂದು ಗುಡುಗಿದ್ದಾರೆ. ಡೆಹ್ರಾಡೂನ್ ಮತ್ತು ಲಖ್ನೋ ಮಧ್ಯೆ ವಿಮಾನ ಹಾರಾಟಗಳು ಹೆಚ್ಚಾಗಲಿ ಎಂದು ಅವರು ಆಶಿಸಿದ್ದಾರೆ.
ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ತಿವಾರಿಜೀ, ಉತ್ತರಾಕಂಡದಲ್ಲಿ 90 ಪರಿಸರ ಸಂಬಂಧಿ ಯೋಜನೆಗಳು ಕಾರ್ಯಗತವಾಗದೆ ಸೊರಗುತ್ತಿವೆ. ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ರಾಜ್ಯ ಸರಕಾರದ ನಡುವೆ ಸಹಕಾರವೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಿ ಎಂದು ಜಯಂತಿ ಅವರಿಗೆ ತಿವಾರಿ ತಾಕೀತು ಮಾಡಿದ್ದಾರೆ. ಸಾಧ್ಯವಾದರೆ ನೀವೇ ಒಮ್ಮೆ ಇಲ್ಲಿಗೆ ಬಂದು ನೋಡಿಕೊಮಡು ಹೋಗಿ ಎಂದೂ ಅಲವತ್ತುಕೊಂಡಿದ್ದಾರೆ.
ಇನ್ನು ಹುಲಿ ಗಣತಿಯನ್ನೂ ಕೈಗೆತ್ತಿಕೊಳ್ಳುವಂತೆ ಪರಿಸರ ಸಚಿವಾಲಯದೆದುರು ಬೇಡಿಕೆಯಿಟ್ಟಿದ್ದಾರೆ. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ತಿವಾರಿ ಅವರ ಈ ಬೇಡಿಕೆಗಳ ಪೈಕಿ ಎಷ್ಟು ಕಾರ್ಯಗತವಾಗುತ್ತವೋ ಗೊತ್ತಿಲ್ಲ, ಆದರೆ ತಿವಾರಿ ಬದುಕಿನ ಇಳಿವಯಸ್ಸಿನಲ್ಲೂ ಜನಪರವಾಗಿರುವುದು ಕುತೂಹಲಕಾರಿಯಾಗಿದೆ.












Click it and Unblock the Notifications