ಯಡಿಯೂರಪ್ಪ ಬಿಜೆಪಿಯಲ್ಲೇ ಉಳಿಯೋದು ಏನಾಯ್ತು?

yeddyurappa-to-stay-back-bjp-high-commnad-yet-to-decide
ಬೆಂಗಳೂರು, ಅ. 31: ಏನೂ ಆಗಿಲ್ಲ. ಗೊಂದಲ ಮತ್ತಷ್ಟು ಹೆಚ್ಚಾಗಿದೆಯಷ್ಟೇ. ಅತ್ತ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಎಂದಿನಂತೆ ಯಡಿಯೂರಪ್ಪ ವಿಷಯದಲ್ಲಿ ಹಠ ಹಿಡಿದಿದ್ದಾರೆ. ಇತ್ತ ಬಿಎಸ್‌. ಯಡಿಯೂರಪ್ಪ ಅವರೂ ನಾನೂ ಏನೂ ಕಮ್ಮಿಯಿಲ್ಲ ಎಂದು ಪಕ್ಷ ಬಿಡೋದು ಗ್ಯಾರಂಟಿ ಎಂಬ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಈ ಮಧ್ಯೆ, ರಾಜ್ಯ ಸಂಸದರು, ಸಚಿವರು, ಶಾಸಕರು ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ವರಿಷ್ಠ ನಾಯಕರ ಮನೆಗಳ ಬಾಗಿಲುಬಡಿಯುತ್ತಿದ್ದಾರೆ. ಗಡ್ಕರಿ ಸಹಿತ ಕೆಲ ನಾಯಕರು ಮಗುಮ್ಮಾಗಿ ಉಳಿದಿದ್ದಾರೆ. ಈ ಮಧ್ಯೆ, ಬೆಂಗಳೂರಿಗೆ ನಾಲ್ಕನೇ ಹಂತದಲ್ಲಿ ಕಾವೇರಿ ನೀರು ಹರಿಸಲು ಸಿಎಂ ಶೆಟ್ಟರ್ ಇಂದು ಬೆಂಗಳೂರಿಗೆ ವಾಪಸಾಗಬೇಕಿದೆ.

ಅ. 30ರಂದು ವರಿಷ್ಠರ ಜತೆ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದೇ ಬಂತು ಯಾವುದೂ ನಿರ್ಣಾಯಕವಾಗಿಲ್ಲ. ಯಡಿಯೂರಪ್ಪ ರಾಜಕೀಯ ಭವಿಷ್ಯ ನಿರ್ಧರಿಸಲು ದೆಹಲಿಯಲ್ಲಿ ಇನ್ನೂ ಒಂದೆರಡು ದಿನ ನಾಟಕಗಳು ನಡೆಯುವ ಲಕ್ಷಣಗಳಿವೆ.

ತಮ್ಮ ವಿರುದ್ಧವೇ ಹಾಸಿಹೊದ್ದುಕೊಳ್ಳುವಷ್ಟು ಭ್ರಷ್ಟಾಚಾರ ಆರೋಪಗಳು:
ದೆಹಲಿಯಲ್ಲಿ ಸಿಎಂ ಶೆಟ್ಟರ್, ಈಶ್ವರಪ್ಪ ಮತ್ತಿತರರು ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಅನಂತ ಕುಮಾರ್, ಮುರಳಿ ಮನೋಹರ ಜೋಷಿ, ಧರ್ಮೇಂದ್ರ ಪ್ರಧಾನ್ ಮತ್ತಿತರರನ್ನು ನಿನ್ನೆ ಮಧ್ಯಾಹ್ನ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ, ತಮ್ಮ ವಿರುದ್ಧವೇ ಹಾಸಿಹೊದ್ದುಕೊಳ್ಳುವಷ್ಟು ಭ್ರಷ್ಟಾಚಾರ ಆರೋಪಗಳು ಇವೆ. ಹಾಗಾಗಿ ಜೇಟ್ಲಿ ಹಾಗೂ ಧರ್ಮೇಂದ್ರ ಪ್ರಧಾನ್ ಅವರ ಜತೆ ಮಾತುಕತೆ ನಡೆಸುವಂತೆ ರಾಜ್ಯ ನಿಯೋಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೂಚಿಸಿದ್ದಾರೆ.

ಈ ಮಧ್ಯೆ ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ನಿಜವಾಗಿಯೂ ಪ್ರಯತ್ನಗಳು ನಡೆಯುತ್ತಿವೆಯೆ ಅಥವಾ ಇದು ಕೇವಲ ಕಣ್ಣೊರೆಸುವ ತಂತ್ರವೇ' ಎಂಬ ಸತ್ಯ ಬೆಳಕಿಗೆ ಬರಲು ಇನ್ನೂ ಕೆಲಕಾಲ ಹಿಡಿಯಬಹುದು.

ಆದರೆ, ಯಡಿಯೂರಪ್ಪ ಬಗ್ಗೆ ಬಿಜೆಪಿ ವರಿಷ್ಠರಲ್ಲಿ ಒಂದು ಗುಂಪು ಮತ್ತು ರಾಜ್ಯ ಬಿಜೆಪಿ ನಾಯಕರು ಒಲವು ತೋರಿರುವುದಂತೂ ಸತ್ಯ. 'ಅವರ (ಯಡಿಯೂರಪ್ಪ) ಘನತೆ ಹಾಗೂ ಯೋಗ್ಯತೆಗೆ ತಕ್ಕಂತೆ ಯಾವುದಾದರೂ ಸ್ಥಾನಮಾನ ನೀಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು' ಎಂದು ಯಡಿಯೂರಪ್ಪ ಬೆಂಬಲಿಗರು ವರಿಷ್ಠರಿಗೆ ಮನವಿ ಮಾಡಿದ್ದಾರೆ.

'ನಾವು ಯಾವುದೇ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿಲ್ಲ. ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಪುನರ್ವಸತಿ ಕಲ್ಪಿಸುವಂತೆ ಕೇಳಿದ್ದೇವೆ. ಹೈಕಮಾಂಡಿಗೂ ಆಸಕ್ತಿ ಇದ್ದಂತಿದೆ. ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ' ಎಂದು ಯಡಿಯೂರಪ್ಪ ನಿಷ್ಠರೊಬ್ಬರು ನಿಯೋಗದ ದೆಹಲಿ ಯಾತ್ರೆಯ ಬಗ್ಗೆ ಷರಾ ಬರೆದಿದ್ದಾರೆ.

ಇದೇ ವೇಳೆ, ಯಡಿಯೂರಪ್ಪ ಪಕ್ಷ ತೊರೆದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಎಚ್ಚರಿಕೆಯನ್ನು ನಿಯೋಗದ ಮುಖಂಡರು ವರಿಷ್ಠರಿಗೆ ನೀಡಿದ್ದಾರೆ ಎನ್ನಲಾಗಿದೆ. ಉಪ ಮುಖ್ಯಮಂತ್ರಿ ಆರ್ ಅಶೋಕ್, ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ, ಉಮೇಶ ಕತ್ತಿ, ರಾಮದಾಸ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಮಣ್ಣ ಸೇರಿದಂತೆ ಹಲವು ಸಚಿವರು ನಿಯೋಗದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+