ಮಹಾಬಲಿಪುರಂ ಅಪ್ಪಳಿಸಿದ 'ನೀಲಂ', ಅಬ್ಬರದ ಮಳೆ

Nilam cyclone hits Mahabalipuram
ಚೆನ್ನೈ, ಅ. 31 : ನಿರೀಕ್ಷೆಯಂತೆ ಸಂಜೆ 5.30ರ ಸುಮಾರಿಗೆ ತಮಿಳುನಾಡಿನ ಮಹಾಬಲಿಪುರಂ ತೀರಕ್ಕೆ 'ನೀಲಂ' ಚಂಡಮಾರುತ ಅಪ್ಪಳಿಸಿದ್ದು, ತಮಿಳುನಾಡಿನ ಕರಾವಳಿಯುದ್ದಕ್ಕೂ ಬಿರುಗಾಳಿ ಸಮೇತ ಭಾರೀ ಮಳೆ ಸುರಿಯುತ್ತಿದೆ. ಮಹಾಬಲಿಪುರಂನಲ್ಲಿ 25ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಚೆನ್ನೈ ಸಮೀಪದ ಪಟ್ಟಣಪಾಕಂನಲ್ಲಿ ತೈಲ ಸಾಗಿಸುತ್ತಿದ್ದ ಹಡಗೊಂದು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿತ್ತು. ಅದರಲ್ಲಿರುವ 17 ಜನರನ್ನು ಪಾರುಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ಚೆನ್ನೈ ನಗರದ ಎಲ್ಲೆಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಬಿರುಗಾಳಿಗೆ ಸಿಕ್ಕು ಮರದ ಟೊಂಗೆ, ಎಲೆಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿವೆ.

ಸುಮಾರು 100 ಕಿ.ಮೀ. ವೇಗದಲ್ಲಿ ನೀಲಂ ಚಂಡಮಾರುತ ಸಾಗುತ್ತಿದ್ದು, ಮೂರು ದಿನಗಳ ಕಾಲ ತನ್ನ ಆರ್ಭಟ ತೋರಲಿದೆ. ಕಡಲತೀರದಲ್ಲಿರುವ ಜನರು ಕಟ್ಟೆಚ್ಚರದಲ್ಲಿ ಇರಬೇಕೆಂದು ಹವಾಮಾನ ಇಲಾಖೆ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ತಮಿಳುನಾಡಿನ ಕಡಲತೀರದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಆರಂಭವಾಗಿದೆ.

ಚೆನ್ನೈ, ನಾಗಪಟ್ಟಣಂ, ಕಡಲೂರು, ಪಾಂಡಿಚೇರಿ ಕಡಲತೀರದಲ್ಲಿ ಅಡ್ಡಾಡದಂತೆ ಜನರಿಗೆ ನಿಷೇಧ ಹೇರಲಾಗಿದೆ. ಚೆನ್ನೈನ ಮರೀನಾ ಬೀಚಿನಲ್ಲಿ ಭಾರೀ ಗಾತ್ರದ ಅಲೆಗಳು ತೀರವನ್ನು ಅಪ್ಪಳಿಸುತ್ತಿದ್ದು, ಸಮುದ್ರದ ಅಲೆಗಳು ಗಾಂಧಿ ಪ್ರತಿಮೆಯನ್ನು ಮುತ್ತಿಡುತ್ತಿವೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಚೆನ್ನೈನಲ್ಲಿ ಶಾಲಾಕಾಲೇಜುಗಳಿಗೆ ಬುಧವಾರ ರಜಾ ನೀಡಲಾಗಿತ್ತು. ಮಧ್ಯಾಹ್ನವೇ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳನ್ನು ಮುಚ್ಚಲಾಗಿತ್ತು. ಸರಕಾರಿ ಕಚೇರಿಯಿಂದಲೂ ನೌಕರರು ಮಧ್ಯಾಹ್ನ 2 ಗಂಟೆಗೆಲ್ಲ ಜಾಗ ಖಾಲಿ ಮಾಡಿ ಮನೆ ಸೇರಲು ಆರಂಭಿಸಿದ್ದರು. ಎರಡು ಆಳು ಎತ್ತರದಿಂದ ಅಪ್ಪಳಿಸುತ್ತಿರುವ ಅಲೆಗಳನ್ನು ನೋಡಲು ಮರೀನಾ ಬೀಚಲ್ಲಿ ಜನರ ಸಾಗರವೇ ನೆರೆದಿತ್ತು. ಜನರನ್ನು ಅಲ್ಲಿಂದ ಕಳಿಸಲು ಪೊಲೀಸರು ಭಾರೀ ಕಷ್ಟಪಡಬೇಕಾಯಿತು ಎಂದು ಚೆನ್ನೈನಲ್ಲಿರುವ ಕನ್ನಡಿಗ ಗಣೇಶ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಆಂಧ್ರದಲ್ಲೂ ಮಳೆಯ ಆಟಾಟೋಪ : ನೀಲಂ ಬಿರುಗಾಳಿ ತಮಿಳುನಾಡಿನಿಂದ ಆಂಧ್ರಪ್ರದೇಶದತ್ತ ಸಾಗಿದ್ದು, ಅಲ್ಲಿಯೂ ಜನರು ಕಟ್ಟೆಚ್ಚರದಿಂದ ಇರಬೇಕೆಂದು ಎಚ್ಚರಿಸಲಾಗಿದೆ. ನೀಲಂ ಪ್ರಭಾವದಿಂದ ಆಂಧ್ರಪ್ರದೇಶದ ಕಡಲ ತೀರದಲ್ಲಿಯೂ ಭಾರೀ ಮಳೆ ಆರಂಭವಾಗಿದೆ. ಪ್ರಕಾಶಂ, ನೆಲ್ಲೂರು, ಚಿತ್ತೂರು, ಕಡಪ್ಪಾ, ಮಚಲಿಪಟ್ಟಣಂ, ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಬಿರುಗಾಳಿಯ ಹೊಡೆತಕ್ಕೆ ಅನೇಕ ಮರಗಳು ನೆಲಕ್ಕೆ ಉರುಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+