ಬೆಂಗಳೂರು ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

ಬಂಗಾಳ ಕೊಲ್ಲಿಯಲ್ಲಿ ನೀಲಂ ಆರ್ಭಟ ಆರಂಭವಾಗಿರುವುದರಿಂದ ಬೆಂಗಳೂರಿನಲ್ಲಿ ಇಡೀ ದಿನ ಮಳೆ ಹುಯ್ಯುತ್ತಿದೆ. ಮಳೆಯ ನಡುವೆಯೂ ಎಲ್ಲೆಡೆ ಗುಡ್ಡೆಯಾಗುತ್ತಿರುವ ಕಸವನ್ನು ತೆಗೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿರುವುದು, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಬಿಎಂಪಿ ಕನ್ನಡಿಗರಿಗೆ ನೀಡುತ್ತಿರುವ ಬಹುದೊಡ್ಡ ಕಾಣಿಕೆ ಎಂದೇ ಹೇಳಬೇಕು.
ಇದು ಕೇವಲ ತಾತ್ಕಾಲಿಕ. ಏಕೆಂದರೆ, ಈ ವಾರದೊಳಗೆ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಮುಚ್ಚಲಾಗುತ್ತಿದೆ. ಆದರೆ, ಚಿಕ್ಕಬಳ್ಳಾಪುರದ ಹೊರವಲಯದಲ್ಲಿ 400 ಎಕರೆ ಜಮೀನನ್ನು ಕಲ ವಿಲೇವಾರಿಗೆ ನಿಗದಿಪಡಿಸಲಾಗಿದೆ. ಹಾಗೆಯೆ, 300 ಕೋಟಿ ರು. ವೆಚ್ಚದಲ್ಲಿ 80 ಘನ ತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಬಿಬಿಎಂಪಿ ಒಪ್ಪಿಗೆ ನೀಡಿದೆ. ಈ ಹೊಸ ಯೋಜನೆಗಳಿಂದ ಕಸ ವಿಲೇವಾರಿ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಬಿಬಿಎಂಪಿ ನಂಬಿದೆ.
ಕಳೆದ ಕೆಲ ತಿಂಗಳುಗಳಿಂದ ಬೆಂಗಳೂರಿನಲ್ಲಿ ಕಸ ವಿಲೇವಾರಿ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಜನರು ಕೂಡ ಹಸಿ ಮತ್ತು ಘನ ತ್ಯಾಜ್ಯಗಳಾಗಿ ವಿಂಗಡಿಸದೆ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕಸ ನಿರ್ವಹಣೆಯಲ್ಲಿ ತೋರುತ್ತಿರುವ ಅಸಡ್ಡೆ ನ್ಯೂಯಾರ್ಕ್ ಟೈಮ್ಸ್ ಮತ್ತಿತರ ಅಂತಾರಾಷ್ಟ್ರೀಯ ಪತ್ರಿಕೆಗಳಿಂದ ಭಾರೀ ಟೀಕೆಗೆ ಗುರಿಯಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಮನುಷ್ಯರೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.
ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷ ಕೆ.ಜೆ. ನರಸಿಂಹ ಸ್ವಾಮಿಯವರು ಹೇಳುವುದೇನೆಂದರೆ, ಕಸ ವಿಂಗಡಿಸುವಲ್ಲಿ ಸಾರ್ವಜನಿಕರೇ ಸರಿಯಾಗಿ ಕೈಜೋಡಿಸಿದರೆ ಅರ್ಧಕ್ಕರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ನಗರ ಸ್ವಚ್ಛ ಉಳಿಯುವುದು ಮಾತ್ರವಲ್ಲ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದು ಎಂಬುದು ಅವರ ಸ್ಪಷ್ಟ ಅಭಿಪ್ರಾಯ.












Click it and Unblock the Notifications