ತಿಂಗಳ ಮಗು ನಡೆಯುತ್ತಂತೆ, ಬೆಂಕಿ ಉಗುಳುತ್ತಂತೆ!

ಹೀಗೆಂದು ಆ ಮಗುವನ್ನು ಹುಟ್ಟಿಸಿದ ಕಾಂಬೋಡಿಯಾದ ಅನಾ ಫರಿಯಾ ಸ್ಯಾಂಟೋಸ್ ಎಂಬ ತಾಯಿಯೇ ಹೇಳಿಕೊಂಡಿದ್ದಾಳೆ. ಈ ಮಗು ಜನ್ಮ ತಾಳಿದ್ದು ಸೆಪ್ಟೆಂಬರ್ 28ರಂದು ಕೆರಿಬಿಯನ್ ಕರಾವಳಿ ಬಳಿಯ ಲೋರಿಕಾ ಎಂಬ ಊರಿನಲ್ಲಿ. ಮಗುವಿನ ಹುಟ್ಟು ಆಕೆಗೆ ಸಂತಸವೇನೂ ತರಲಿಲ್ಲ. ವಿಚಿತ್ರವಾಗಿದ್ದ ಮಗು 'ಮಾರುವೇಶದಲ್ಲಿ ಬಂದ ಭೂತ' ಎಂದೆಲ್ಲ ಜನರು ಹಂಗಿಸುತ್ತಾರೆ ಎಂದು ಐದು ಮಕ್ಕಳ ತಾಯಿಯಾಗಿರುವ ಆಕೆ ಆತಂಕಗೊಂಡಿದ್ದಳು.
1976ರಲ್ಲಿ ಬಿಡುಗಡೆಯಾಗಿದ್ದ 'ದಿ ಓಮೆನ್' ಚಿತ್ರದಲ್ಲಿನ ಮಗುವಿನಂತೆ ಈ ಮಗು ಕೂಡ ಎದ್ದುನಿಂತು ಮಗು ನಡೆಯುತ್ತದೆ. ದೊಡ್ಡವರ ಹಾಗೆ ತನ್ನ ಭಾಷೆಯಲ್ಲಿ ಹರಟೆ ಹೊಡೆಯುತ್ತದೆ. ಮನೆಯ ಹಿಂದೆ, ಮಂಚದ ಕೆಳಗಡೆ, ವಾಷಿಂಗ್ ಮಷೀನ್, ಫ್ರಿಜ್, ಸೂಟ್ಕೇಸ್ ಒಳಗಡೆ ಹೋಗಿ ಬಚ್ಚಿಟ್ಟುಕೊಳ್ಳುತ್ತದೆ ಎಂದು ಮಗುವಿನ ತಾಯಿ ಹೇಳಿರುವುದಾಗಿ ಆರ್‌ಸಿಎನ್ ರೇಡಿಯೋ ಬಿತ್ತರಿಸಿರುವುದಾಗಿ ಡೇಲಿ ಮೇಲ್ ಪ್ರಕಟಿಸಿದೆ.
ಅಕ್ಕಪಕ್ಕದ ಮನೆಯವರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಕೆಟ್ಟ ಭೂತದಂತಿರುವ ಮಗು ಆಗಾಗ ಬೆಂಕಿ ಉಗುಳುತ್ತದೆ ಎಂದು ಹೇಳಿದ್ದಾರೆ. ಮಗು ಹಾಕಿಕೊಂಡಿರುವ ಬಟ್ಟೆಯ ಮೇಲೆ, ಅಡಗಿಕೊಳ್ಳುತ್ತಿದ್ದ ಹಾಸಿಗೆ ಸುಟ್ಟಿರುತ್ತದೆ ಎಂದೂ ಅವರು ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಸ್ಯಾಂಟೋಸ್ ಮತ್ತು ಆಕೆಯ ಗಂಡ ಟ್ಯಾಕ್ಸಿ ಡ್ರೈವರ್ ಆಗಿರುವ ಆಸ್ಕರ್ ಪೆಲೆಸಿಯಾ ಲೋಪೆಜ್‌ರನ್ನು ಸಂಕಷ್ಟಕ್ಕೆ ದೂಡಿವೆ. ಅವರ ಮೇಲೆ ಹಲ್ಲೆಗಳಾಗಿವೆ, ಅವರ ಮನೆ ಮೇಲೆ ಕಲ್ಲುಗಳನ್ನು ತೂರಲಾಗಿದೆ. ತಮಗೂ ಆ ಮಗುವಿನಿಂದ ಕೆಡಕಾಗಬಹುದು ಎಂದು ನೆರೆಹೊರೆಯವರು ಆ ದಂಪತಿಗಳನ್ನು ಮನೆಬಿಟ್ಟು ತೊಲಗುವಂತೆ ಪೀಡಿಸುತ್ತಿದ್ದಾರೆ.
ಆದರೆ, ವೈದ್ಯರು ಈ ವಿದ್ಯಮಾನವನ್ನು ನಂಬಲು ತಯಾರಿಲ್ಲ. ಯಾರಾದರೂ ಮಾಟಮಂತ್ರಿ ಮಾಡಿಸಿರಬಹುದು ಎಂಬ ವ್ಯಾಖ್ಯಾನವನ್ನು ನಂಬಲು ಕಾಂಬೋಡಿಯನ್ ಕುಟುಂಬ ಕಲ್ಯಾಣ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಪೊಲೀಸರು ಮತ್ತು ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಕೂಡ ತಯಾರಿಲ್ಲ. ಬದಲಾಗಿ ಮಗುವಿನ ಮೇಲೆ ಹಲ್ಲೆ ಮಾಡಿದ್ದರಿಂದ ಈ ವಿಪರೀತಗಳು ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ.
ಈ ವಿಸ್ಮಯದ ರಹಸ್ಯವನ್ನು ಭೇದಿಸಲು ಮನಶ್ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ನರರೋಗ ತಜ್ಞರು, ವಕೀಲರು, ವೈದ್ಯರು ಮತ್ತು ಪೊಲೀಸರ ತಂಡವನ್ನು ರಚಿಸಲಾಗಿದ್ದು, ಮಗುವಿನ ರಕ್ಷಣೆ ಪ್ರಥಮ ಆದ್ಯತೆ ನೀಡಲಾಗುವುದು ಎನ್ನಲಾಗಿದೆ. ಮಗು ಅಸಾಮಾನ್ಯ ಬೆಳವಣಿಗೆ ಮತ್ತು ವಿಚಿತ್ರ ಲಕ್ಷಣಗಳನ್ನು ಹೊಂದಿರಬಹುದು, ಆದರೆ ಆ ಮಗುವನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯೆ? (ಪಿಟಿಐ)












Click it and Unblock the Notifications