ಗಡ್ಕರಿಗೊಂದು ನ್ಯಾಯ, ಯಡಿಯೂರಪ್ಪಗೊಂದು ನೀತಿಯಾ?

ಮತ್ತು, ಇನ್ನೊಂದು ತಿಂಗಳಲ್ಲಿ ಅಧಿಕೃತವಾಗಿ ತಾವು ಬಿಜೆಪಿಯಿಂದ ಹೊರಬೀಳುತ್ತಿದ್ದಂತೆ ಗಡ್ಕರಿ ಭ್ರಷ್ಟಾಚಾರವನ್ನು ಯಡಿಯೂರಪ್ಪ ಅವರು ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ಗಡ್ಕರಿಗೊಂದು ನ್ಯಾಯ, ಯಡಿಯೂರಪ್ಪಗೊಂದು ನೀತಿಯಾ? ಎಂದು ಕೇಳುವಂತಾಗಿದೆ. ಇದನ್ನು ಕಂಡು ಕೇಳಿದ ಮತದಾರ ಮಾತ್ರ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ನ್ಯಾಯವೂ ಇಲ್ಲ, ನೀತಿಯೂ ಇಲ್ಲ ಎಂದು ಗಹಗಹಿಸಿ ನಗುತ್ತಿದ್ದಾನೆ.
ಗಮನಾರ್ಹವೆಂದರೆ ಭ್ರಷ್ಟಾಚಾರದ ಸಮ್ಮುಖದಲ್ಲಿ, ಗಡ್ಕರಿ ಮತ್ತು ಯಡಿಯೂರಪ್ಪ ಅವರಂಥ ಧೀಮಂತ ನಾಯಕರನ್ನು ಹೊಂದಿರುವ ಬಿಜೆಪಿಯ ದ್ವಿಮುಖಗಳು ಕಪ್ಪಿಟ್ಟಿವೆ. ಗಡ್ಕರಿ ಮೇಲಿನ ಅರೋಪಗಳನ್ನು ಅಡ್ವಾಣಿ ಸಹಿತ ಇತರೆ ನಾಯಕರು ಸಮರ್ಥಿಸಿಕೊಳ್ಳುತ್ತಿರುವುದು ಭ್ರಷ್ಟಾಚಾರದ ವಿಚಾರದಲ್ಲಿ ಪಕ್ಷದ ಬದ್ಧತೆಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂಬ ಅಭಿಪ್ರಾಯ ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿಬಂದಿದೆ.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಮೇಲೆ ಆರೋಪಗಳು ಕೇಳಿಬಂದಾಗ ಅವರಿಗೆ ಸಮರ್ಥಿಸಿಕೊಳ್ಳಲೂ ಅವಕಾಶ ನೀಡದೆ ತರಾತುರಿಯಲ್ಲಿ ಕೆಳಗಿಳಿಸಲಾಗಿತ್ತು.
ಆದರೆ ಪ್ರಮೋದ್ ಮಹಾಜನ್ ನಿಧನಾನಂತರ ಬಿಜೆಪಿಗೆ 'ಫಂಡ್ ರೈಸರ್' ಆಗಿರುವ ಗಡ್ಕರಿಯ ಬೆನ್ನಿಗೆ ಇಡೀ ಪಕ್ಷ ನಿಂತಿದೆ. 'ಇದು ಗಡ್ಕರಿ ವಿರುದ್ಧ ನಡೆದಿರುವ ಷಡ್ಯಂತ್ರ, ಅವರೇನು ತಪ್ಪೇ ಮಾಡಿಲ್ಲ' ಎಂದೂ ಷರಾ ಬರೆದಿರುವುದು ಪಕ್ಷದ ಇಬ್ಬಗೆಯ ನೀತಿಯನ್ನು ಎತ್ತಿಹಿಡಿಯುತ್ತದೆ. ಜತೆಗೆ, ಬಿಜೆಪಿಯಲ್ಲಿ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂಬ ಯಡಿಯೂರಪ್ಪನವರ ಆರೋಪಕ್ಕೂ ಇದರಿಂದ ಬಲ ಬಂದಿದೆ.












Click it and Unblock the Notifications