ಹಬ್ಬ, ರಜಾ ಕಾಲದಲ್ಲಿ ಮತ್ತೆ ಕೆಎಸ್ಆರ್ ಟಿಸಿ ಮುಷ್ಕರ

ಮೊನ್ನೆಯಷ್ಟೇ ಮುಷ್ಕರಕ್ಕಿಳಿದು, ಬಸ್ ಸಂಚಾರವನ್ನು ಸ್ಥಗಿತಗೊಳಿಸಿ, ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟುಮಾಡಿದ್ದ ಕೆಎಸ್ಆರ್ ಟಿಸಿ ಸಿಬ್ಬಂದಿ ಮತ್ತೆ ಮುಷ್ಕರಕ್ಕೆ ಸಜ್ಜಾಗುತ್ತಿದ್ದಾರೆ. ಹಾಗಾಗಿ, ಎಚ್ಚರಿಕೆಯ ನಡೆ ಹಾಕಿ.
ಕಳೆದ ತಿಂಗಳು ಮುಷ್ಕರ ನಡೆಸಿದ್ದರ ಫಲವಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ಅನಗತ್ಯವಾಗಿ ವರ್ಗಾವಣೆ ಶಿಕ್ಷೆ ವಿಧಿಸಲಾಗುತ್ತಿದೆ. ಜತೆಗೆ, ಮುಷ್ಕರ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದವನ್ನು ಸರಕಾರ ಗೌರವಿಸಿಲ್ಲ ಎಂದು ಕಿಡಿಕಾರಿ ಸ್ವತಃ ಕೆಎಸ್ಆರ್ ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್ ವಿ ಅನಂತಸುಬ್ಬ ರಾವ್ ಭಾನುವಾರ (ಅ.15) ಎಚ್ಚರಿಸಿದ್ದಾರೆ.
ಕೆಎಸ್ಆರ್ ಟಿಸಿ ಅಧಿಕಾರಿಗಳು ಸಿಬ್ಬಂದಿಗೆ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಕಳೆದ ತಿಂಗಳು ಮುಷ್ಕರ ನಡೆಸಿದ್ದೆವು. ಆದರೆ ಅಧಿಕಾರಿಗಳು ಅದರಿಂದ ಪಾಠ ಕಲಿತಿಲ್ಲ. ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ. ಇದರಿಂದ ದಿಕ್ಕುತೋಚದೆ ಸಿಬ್ಬಂದಿ ವರ್ಗ ಕಂಗಾಲಾಗಿದೆ. ಹಾಗಾಗಿ ಯಾವುದೇ ಕ್ಷಣ ಮತ್ತೆ ಬಸ್ ಬಂದ್ ಮಾಡುತ್ತೇವೆ ಎಚ್ಚರಾ ಎಂದು ಅನಂತಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
ಆದರೆ ಇದನ್ನು ಕೇಳಿ ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವಂತೆ ನಮ್ಮ ಮೇಲೆ ಯಾಕೆ ಸ್ವಾಮಿ ಗದಾಪ್ರಹಾರ, ನಿಮ್ಮ ಮುಷ್ಕರದಿಂದ ಸಂತ್ರಸ್ತರಾಗುವುದು ನಿಮ್ಮನ್ನೆ ನಂಬಿಕೊಂಡ ಪ್ರಯಾಣಿಕರು. ಮುಷ್ಕರದ ಬದಲು ಬೇರೆ ಇನ್ಯಾವುದಾದರೂ ಮಾರ್ಗ ಕಂಡುಕೊಳ್ಳಿ. ದಯವಿಟ್ಟು ನಮಗೆ ತೊಂದರೆ ಕೊಡಬೇಡಿ ಎಂದು ಪ್ರವಾಸದ mood ನಲ್ಲಿರುವ ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.
ಈ ಮಧ್ಯೆ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅನಂತಸುಬ್ಬ ರಾವ್ ಅವರು ಅವರಿಬ್ಬರೂ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ. ಜತೆಗೆ ಮುಷ್ಕರ ನಿಲ್ಲಿಸಿ, ಸಿಬ್ಬಂದಿಗೆ ಮಹದುಪಕಾರ ಮಾಡಿದ್ದೇವೆ ಎಂದು ಪೋಸ್ ಕೊಡುತ್ತಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಾಟಕ ಆಡುತ್ತಿದ್ದಾರೆ. ಆದರೆ ನಮ್ಮ ಗೋಳು ನಮ್ಮದು ಎಂದು ಹೇಳಿದ್ದಾರೆ.












Click it and Unblock the Notifications