ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ರಾಷ್ಟ್ರಪತಿ ಭಾಷಣ

Pranab Mukherjee speach in Belgaum
ಬೆಳಗಾವಿ, ಅ. 11 : ಶಾಸನ ರಚನೆ, ಆಡಳಿತ ನಿರ್ವಹಣೆ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಚರ್ಚಿಸಿ ಜನರ ಧ್ವನಿ ಎತ್ತಿ ಅವರ ಕುಂದು-ಕೊರತೆಗಳನ್ನು ನಿವಾರಿಸಲು ಮೀಸಲಿರಿಸಬೇಕಾದ ಸದನದ ಅತ್ಯಮೂಲ್ಯ ಸಮಯವನ್ನು ಅಪವ್ಯಯವಾಗದಂತೆ ಕಾಯ್ದುಕೊಳ್ಳಬೇಕು ಎಂದು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಶಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧ ಉದ್ಘಾಟನೆಯಾದ ಐತಿಹಾಸಿಕ ಸಂದರ್ಭದಲ್ಲಿ ಗುರುವಾರ ರಾಜ್ಯ ಉಭಯ ಸದನಗಳ ಸದಸ್ಯರು, ಆಮಂತ್ರಿತ ಗಣ್ಯರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಲಾಪಕ್ಕೆ ಅಡಚಣೆ ಉಂಟುಮಾಡುವುದು ಪರಿಣಾಮಕಾರಿ ಸಂಸದೀಯ ಅಸ್ತ್ರವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಚುನಾಯಿತ ಸಂಸತ್ತು ಮತ್ತು ಶಾಸನ ಸಭೆ ಪ್ರಜಾಪ್ರಭುತ್ವದ ನೈಜ ರೂಪ. ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಸರ್ಕಾರವನ್ನು ಮುನ್ನಡೆಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಜನಪ್ರತಿನಿಧಿಗಳು ಅನುಕರಣೀಯ, ಉತ್ತಮ ಹಾಗೂ ಜವಾಬ್ದಾರಿಯುತ ನಡವಳಿಕೆಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಬಯಸಿದ ಅವರು ತಾವು ಸಾರ್ವಜನಿಕರ ಧರ್ಮದರ್ಶಿಗಳು ಎಂಬುದನ್ನು ಶಾಸಕರು ಸದಾ ಕಾಲ ಸ್ಮರಣೆಯಲ್ಲಿರಿಸಿಕೊಳ್ಳಬೇಕೆಂದರು.

ಕುಸಿಯುತ್ತಿರುವ ಚರ್ಚಾ ಸಮಯ : ಕೇಂದ್ರ ಸರ್ಕಾರದ ಮೊಟ್ಟಮೊದಲ ಆಯವ್ಯಯದ ಕೇವಲ 293 ಕೋಟಿ ರು. ಆಗಿತ್ತು. ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಮುನ್ನ ಕೇಂದ್ರ ಹಣಕಾಸು ಸಚಿವರಾಗಿ ತಾವು ಮಂಡಿಸಿದ ಆಯವ್ಯಯ 12 ಲಕ್ಷ ಕೋಟಿ ರು ಆಗಿತ್ತು. ಭಾರತೀಯ ಸಂಸದೀಯ ವಿಶ್ಲೇಷಣಾ ವರದಿಗಳ ಪ್ರಕಾರ, ಆಯವ್ಯಯದ ಮೇಲಿನ ಚರ್ಚೆಗೆ ಮೊದಲು ಶೇಕಡಾ 60ರಷ್ಟು ಸಮಯ ಬಳಕೆಯಾಗುತ್ತಿತ್ತು. ಆದರೆ, ಇದೀಗ ಚರ್ಚಾ ಸಮಯದ ಅವಧಿ ಶೇಕಡ 10ಕ್ಕೆ ಕುಸಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಶಾಸನ ರಚನೆಗೆ ಶಾಸಕರು ಮೀಸಲಿರಿಸುತ್ತಿರುವ ಸಮಯ ಕಡಿತಗೊಳ್ಳುತ್ತಿದೆ, ಚರ್ಚಾ ಸಮಯವೂ ಕುಸಿಯುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಶೋಭಾಯಮಾನವಲ್ಲ. ಶಾಸನ ರಚನೆ, ಆರ್ಥಿಕ ಮತ್ತು ಹಣಕಾಸು ವಿಷಯಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಶ್ರೀಸಾಮಾನ್ಯರ ಹಕ್ಕುಗಳ ವಾರಸುದಾರರಾಗಿ ಜನಪ್ರತಿನಿಧಿಗಳು ತೀವ್ರ ಎಚ್ಚರವಹಿಸಬೇಕು ಎಂದು ಹಿತ ನುಡಿದರು.

ರಾಜ್ಯದ ಬಗ್ಗೆ ಮೆಚ್ಚುಗೆ : ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ಮುಂದಿನ 20 ವರ್ಷಗಳ ದೃಷ್ಠಿಕೋನ ಹೊತ್ತ ವಿಷನ್ 2020 ಅನಾವರಣಗೊಳಿಸಿದ ರಾಜ್ಯ ಕರ್ನಾಟಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ರೇಷ್ಮೆ, ಮೈಸೂರು ಮಲ್ಲಿಗೆ, ಮೈಸೂರು ಶ್ರೀಗಂಧದ ತೈಲ, ನಂಜನಗೂಡು ರಸಬಾಳೆ, ಚನ್ನಪಟ್ಟಣದ ಆಟಿಕೆಗಳು, ಇಳಕಲ್ ಹಾಗೂ ಮೊಳಕಾಲುಮೂರು ಸೀರೆಗಳು ಅಂತಾರಾಷ್ಟ್ರೀಯ ಮಟ್ಟದವಾಗಿವೆ ಎಂದು ಅವರು ಪ್ರಶಂಶಿಸಿದರು. ನಾಗರಿಕ ಸ್ನೇಹಿ ಕರ್ನಾಟಕ ನಾಗರೀಕ ಸೇವಾ ಖಾತರಿ ಕಾಯಿದೆ 'ಸಕಾಲ' ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಬಾಳಿದ ಪ್ರಮುಖ ವ್ಯಕ್ತಿಗಳ ಸ್ಮರಣೆ ಮಾಡಿದರು. ಬೆಳಗಾವಿಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್‌ನ ಸಭೆ ನಡೆದಿದ್ದು, ಸ್ವಾತಂತ್ರ್ಯವೇ ನನ್ನ ಜನ್ಮ ಸಿದ್ಧ ಹಕ್ಕು ಎಂದು ಬಾಲ ಗಂಗಾಧರ ಟಿಳಕ್ ಅವರು ಬೆಳಗಾವಿಯಲ್ಲಿಯೇ ಪ್ರತಿಪಾದಿಸಿದ್ದನ್ನು ಸ್ಮರಿಸಿದರು. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ದೇಶಕ್ಕೆ ಕೊಡುಗೆ ನೀಡಿದ ಬೆಳಗಾವಿಯ ಮಹನೀಯರನ್ನೂ ರಾಷ್ಟ್ರಪತಿಗಳು ಸ್ಮರಿಸಿಕೊಂಡರು.

ಯಾರ್ಯಾರು ಉಪಸ್ಥಿತರಿದ್ದರು? : ಈ ಮುನ್ನ, ತಮ್ಮ ಸ್ವಾಗತ ಭಾಷಣದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಅವರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ಪರಿಕಲ್ಪನೆಯ ಸ್ಮರಿಸಿದರು. ರಾಜ್ಯಪಾಲ ಹಂಸರಾಜ ಭಾರಧ್ವಾಜ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತಿಗಳಾದ ಕೆ.ಎಸ್. ಈಶ್ವರಪ್ಪ ಮತ್ತು ಆರ್. ಅಶೋಕ್, ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ರಾಜ್ಯ ವಿಧಾನ ಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಾ ಎಂ. ವೀರಪ್ಪ ಮೊಯಿಲಿ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಡಿ.ವಿ. ಸದಾನಂದಗೌಡ ಅವರೂ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+