ಮುಸ್ಲಿಮರು ಆಶೀರ್ವಾದ ಮಾಡಿದರೆ ಋಣ ತೀರಿಸುವೆ, ಎಚ್ಡಿಕೆ

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಊಹಿಸಲೂ ಅಸಾಧ್ಯವಾದ ಕೊಡುಗೆಗಳನ್ನು ನೀಡಲಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಪಕ್ಷದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಆಯೋಜಿಸಿದ್ದ ಹಜ್ ಯಾತ್ರಿಕರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಆಶೀರ್ವಾದ ಮಾಡಿದರೆ ಅವರ ಋಣ ತೀರಿಸುವೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷ ಈ ಹಿಂದೆ ಅಧಿಕಾರದಲ್ಲಿದ್ದಾಗ ಮುಸ್ಲಿಂ ನಾಯಕರಿಗೆ ಸಾಕಷ್ಟು ಅವಕಾಶ ನೀಡಿದ್ದೆವು, ಇನ್ನೂ ನೀಡುತ್ತೇವೆ. ಮುಸ್ಲಿಂ ಸಮುದಾಯದ ಮೇಲೆ ಪಕ್ಷಕ್ಕೆ ವಿಶೇಷ ಕಾಳಜಿ ಇದೆ.
ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ವಿಧಾನಪರಿಷತ್ ಗೆ ಕಳುಹಿಸಿದ್ದೇವೆ. ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿಮ್ಮ ಸಹಕಾರ ಬೇಕೆಂದು ಕುಮಾರಸ್ವಾಮಿ ಹೇಳಿದ್ದಾರೆ.
ಶಾಸಕ ಜಮೀರ್ ತಮ್ಮ ಸ್ವಂತ ವೆಚ್ಚದಲ್ಲಿ 35 ಬಡ ಯಾತ್ರಿಕರನ್ನು ಆಯ್ಕೆ ಮಾಡಿ ಹಜ್ ಯಾತ್ರೆಗೆ ಕಳುಹಿಸುತ್ತಿದ್ದಾರೆ.
ಸಾಮೂಹಿಕ ವಿವಾಹ ಮುಂತಾದ ಅವರ ಜನಪರ ಕೆಲಸ ಶ್ಲಾಘನೀಯ. ಜಮೀರ್ ನಮ್ಮ ಪಕ್ಷದ ಶಾಸಕ ಎನ್ನಲು ನನಗೆ ಹೆಮ್ಮೆಯಾಗುತ್ತದೆ ಎಂದು ಕುಮಾರಸ್ವಾಮಿ, ಜಮೀರ್ ಅಹಮದ್ ಅವರನ್ನು ಹೊಗಳಿದ್ದಾರೆ.
ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸುವುದಾದರೆ ತಕ್ಷಣ ಸ್ಥಾಪಿಸಲಿ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ದ್ವಂದ್ವ ಹೇಳಿಕೆ ನೀಡುವುದು ಬೇಡ.
ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದೇನೆ, ಡಿಸೆಂಬರ್ ನಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿಕೆ ನೀಡಿ ಸರಕಾರವನ್ನು ತೀವ್ರ ನಿಗಾ ಘಟಕಕ್ಕೆ ತಳ್ಳಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications