ಬಂದ್ : ಬೆಂಗಳೂರಿನ ಚಿತ್ರವಿಚಿತ್ರ ಚಿತ್ರಗಳು!

ಬೆಂಗಳೂರು, ಅ. 6 : ಕರ್ನಾಟಕ ಬಂದ್! ಒಬ್ಬೊಬ್ಬರಿಗೆ ಒಂದೊಂದು ರೀತಿ, ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ. ಪರರಾಜ್ಯದಿಂದ ಬಂದವರಿಗೆ ವೀಕೆಂಡ್ ಹಾಳಾಯ್ತಲ್ಲ ಎಂಬ ಸಂಕಟ, ಕೆಲಸಕ್ಕೆ ಹೋಗಲೇಬೇಕಾದವರಿಗೆ ಹೋಗಲೋ ಬೇಡವೋ ಎಂಬ ಉಭಯಸಂಕಟ, ಕಿಡಿಗೇಡಿಗಳಿಗೆ ಕಲ್ಲು ಹೊಡೆದು ಟೈರು ಸುಟ್ಟು ತರಲೆ ಮಾಡುವ ತವಕ, ರೈತರಿಗೆ ಕನ್ನಡಪರರಿಗೆ ಹೋರಾಟ ಕಾವೇರಿ ನೀರು ನಿಲ್ಲುವ ತನಕ, ರಾಜಕಾರಣಿಗಳಿಗೆ ತಲೆನೋವಂತೆ, ಪೊಲೀಸರಿಗೆ ಲಾ ಅಂಡ್ ಆರ್ಡರ್ ಚಿಂತೆ.

ಇನ್ನು ರಿಪೋರ್ಟರುಗಳಿಗೆ ಫೋಟೋಗ್ರಾಫರುಗಳಿಗೆ ಸುದ್ದಿಯ ಬೆನ್ನು ಹತ್ತಿ ಕ್ಷಣಕ್ಷಣದ ವಿಭಿನ್ನ ಸುದ್ದಿಗಳನ್ನು ಜನರಿಗೆ ನೀಡುವ ಕೆಲಸವಾದರೆ, ಕೆಲಸಕ್ಕೂ ಹೋಗದಿರುವವರಿಗೆ ಮತ್ತು ಹೋರಾಟಕ್ಕೂ ಇಳಿಯದವರಿಗೆ ಮನೆಯಲ್ಲಿಯೇ ಕುಳಿತು ರುಚಿಯಾಗಿ ಮಾಡಿಟ್ಟ ಅಡುಗೆಯನ್ನು ಹೊಟ್ಟೆಗೆ ಇಳಿಸುತ್ತ, ಸಿನೆಮಾ ಇದ್ದರೆ ಸಿನೆಮಾ ನೋಡುತ್ತ, ಇಲ್ಲದಿದ್ದರೆ ನ್ಯೂಸ್ ನೋಡುತ್ತ ಆರಾಮವಾಗಿ ದಿನಕಳೆಯುವ ಅವಕಾಶ. ಇನ್ನು ವ್ಯಾಪಾರಸ್ಥರಿಗೆ ಒಂದು ದಿನದ ಗಳಿಕೆ ಹೋಯ್ತಲ್ಲಾ ಎಂಬ ದುಗುಡ.

ಈ ಜನರದೆಲ್ಲಾ ಜೀವನ ಒಂದು ರೀತಿಯದಾದರೆ ಮತ್ತೊಂದು ವರ್ಗದ ಜನರು, ತಮಗೂ ಬಂದ್‌ಗಳಿಗೂ ಸಂಬಂಧವೇ ಇಲ್ಲವೆನ್ನುವಂತೆ ತಮ್ಮ ಲೋಕದಲ್ಲಿಯೇ ವಿಹರಿಸುತ್ತಿರುತ್ತಾರೆ. ಕೆಲವರಿಗೆ ಬೇರೊಬ್ಬರು ಹೇಳುವವರೆಗೆ ಬಂದ್ ಇದೆ ಎಂಬ ವಿಷಯವೇ ಗೊತ್ತಿರುವುದಿಲ್ಲ. ಇನ್ನು ಕೆಲವರಿಗೆ ಬಂದ್ ಅಂದರೇನು ಎಂಬುದರ ಪರಿವೆಯೇ ಇರುವುದಿಲ್ಲ. ಇನ್ನು ಕೆಲವರು ಬಂದ್ ಇದ್ದರೆಷ್ಟು ಬಿಟ್ಟರೆಷ್ಟು, ತಾವುಂಟು ತಮ್ಮ ಲೋಕವುಂಟು ಎಂದು ಲೋಕಾಭಿರಾಮವಾಗಿ ಕಾಲ ಕಳೆಯುತ್ತಿರುತ್ತಾರೆ. [ಕರ್ನಾಟಕ ಬಂದ್ ಗ್ಯಾಲರಿ]

ಅಂತಹ ಕೆಲವರ ಚಿತ್ರಣ ಇಲ್ಲಿದೆ

ಚೌಕಾಬಾರಾ ಆಡಲು ಬಂದ್‌ಗಿಂತ ಸಮಯ ಬೇಕೆ?

ಚೌಕಾಬಾರಾ ಆಡಲು ಬಂದ್‌ಗಿಂತ ಸಮಯ ಬೇಕೆ?

ಮೈಸೂರಿನಿಂದ ಮೂವತ್ತು ವರ್ಷಗಳ ಹಿಂದೆ ಬಂದಿರುವ ಬೆಂಗಳೂರಿಗೆ ಹೊಟ್ಟೆಹೊರೆಯಲು ಬಂದಿರುವ ರಾಮಯ್ಯ ಮತ್ತು ಲೀಲಮ್ಮ ದಂಪತಿಗಳು ಜಯನಗರದ ಎಲಿಫೆಂಟ್ ರಾಕ್ ರಸ್ತೆಯ ಫುಟ್‌ಪಾತಿನಲ್ಲಿ ಆರು ಕವಡೆ, ನಾಲ್ಕು ಒಡೆದ ಹುಣಸೆಬೀಜ, ನಾಲ್ಕು ಕಲ್ಲುಗಳನ್ನಿಟ್ಟುಕೊಂಡು, ಬೆಣಚುಕಲ್ಲಿನಿಂದಲೇ 49 ಮನೆಗಳಿರುವ ಚೌಕಗಳನ್ನು ಬರೆದು ಚೌಕಾಬಾರಾ ಆಡುತ್ತಿದ್ದರು. ತಿಂಗಳಿಗೆ ಐದು ಸಾವಿರ ಸಂಬಳ, ಕಟ್ಟುತ್ತಿರುವ ಬಿಲ್ಡಿಂಗನ್ನು ಕಾವಲು ಕಾಯುವ ಕೆಲಸ, ಮಕ್ಕಳಿರುವುದು ಹರಿಹರದಲ್ಲಿ, ಇಲ್ಲಿ ಗಂಡ ಹೆಂಡತಿಯರಿಬ್ಬರೇ. ಬಂದ್ ಇದ್ದಾಗ ಕಟ್ಟುವ ಕೆಲಸವೂ ಇಲ್ಲ. ಇನ್ನೇನು ಮಾಡುವುದು? ಟೈಂ ಪಾಸ್ ಮಾಡುವುದಾದರೂ ಹೇಗೆ? ಇದ್ದೇ ಇದೆಯಲ್ಲ ಚೌಕಾಬಾರಾ. ಅಯ್ಯೋ, ದೀಪಾವಳಿ ಬಿಟ್ಟರೆ ಇಂಥ ಆಟ ಆಡಲು ಸಮಯವಾದರೂ ಎಲ್ಲಿರುತ್ತೆ?

ಪ್ರಪಂಚವೇ ದೇವರು ಮಾಡಿರೋ ಬಾರು!

ಪ್ರಪಂಚವೇ ದೇವರು ಮಾಡಿರೋ ಬಾರು!

ಐವತ್ತೈದು ಅರವತ್ತು ಆಸುಪಾಸಿನ ಈ ವ್ಯಕ್ತಿಗೆ ಪ್ರಪಂಚವೇ ದೇವರು ಮಾಡಿರೋ ಬಾರು ನಾವೆಲ್ಲರು ಇಲ್ಲಿ ಬಂಧು ಮಿತ್ರರು. ಜಯನಗರದ ಮೂರನೇ ಬ್ಲಾಕಿನಲ್ಲಿರುವ ಹೆರಾಲ್ಡ್ ಬಾರ್ ಮತ್ತು ರೆಸ್ಟೋರೆಂಟ್ ಬಳಿ ಇನ್ನೇನು ಬಾಗಿಲು ತೆರೆದೇಬಿಡುತ್ತಾರೆಂದು ವಿಚಿತ್ರ ಭಂಗಿಯಲ್ಲಿ ಕುಳಿತೇ ಇದ್ದ. ಅಂಗಡಿಯವನೊಬ್ಬ ತುಸುವೇ ಬಾಗಿಲು ತೆರೆದು ಹೊರಗೆ ಏನು ನಡೆದಿದೆ ಎಂದು ಇಣುಕಿ ನೋಡಿದಾಗ ಈವಯ್ಯನಿಗೆ, ಸದ್ಯ ಓಪನ್ ಆಯ್ತಲ್ಲ ಎಂಬ ಆಶಾಭಾವನೆ ಮೂಡಿತ್ತು. ತಟಕ್ಕನೆ ಮತ್ತೆ ಬಾಗಿಲು ಹಾಕಿಕೊಂಡು ಅಂಗಡಿಯವ ಒಳಹೋದಾಗ ಮತ್ತೆ ನಿರಾಶೆ. ಈತನಿಗೆ ಕರ್ನಾಟಕ ಬಂದ್ ಬಗ್ಗೆ ಗೊತ್ತಿರುತ್ತದಾ, ಡೌಟ್!

ಹೊಟ್ಟೆ ಹೊರೆಯಲು ಕಟ್ಟಿಗೆ ಹೊರಲೇಬೇಕು

ಹೊಟ್ಟೆ ಹೊರೆಯಲು ಕಟ್ಟಿಗೆ ಹೊರಲೇಬೇಕು

ರಸ್ತೆಗಳೆಲ್ಲ ಬರಿದೋ ಬರಿದು, ಅಲ್ಲಲ್ಲಿ ಓಡಾಡುತ್ತಿದ್ದ ದ್ವಿಚಕ್ರ, ನಾಲ್ಕುಚಕ್ರದ ವಾಹನಗಳು, ಆಗಾಗ ಕೂಗುತ್ತ ಬರುತ್ತಿದ್ದ ಪ್ರತಿಭಟನಾಕಾರರು, ಗಲಾಟೆ ಇಲ್ಲದ್ದರಿಂದ ಸರ್ಕಲ್ಲಿನಲ್ಲಿ ಕುಳಿತಿದ್ದ ಪೊಲೀಸಪ್ಪಂದಿರಿಗೆ ಕೆಲಸವೇ ಇಲ್ಲ. ಅಷ್ಟರಲ್ಲಿ ಒಂದು ಮಹಿಳೆಯ ಗುಂಪು ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದರು. ಉಟ್ಟಿದ್ದು ಉತ್ತರ ಕರ್ನಾಟಕದ ಮಹಿಳೆಯರು ಉಡುವ ಕಚ್ಚೆಯ ಶೈಲಿ, ಕಾಲಲ್ಲಿ ಚಪ್ಪಲಿಯಿಲ್ಲ, ತಲೆಯ ಮೇಲೆ ಕಟ್ಟಿಗೆಯ ಹೊರೆ. ಬಂದ್ ಇದ್ದರೇನು, ಇರದಿದ್ದರೇನು ಹೊಟ್ಟೆ ಹೊರೆಯಲೇಬೇಕಲ್ಲ, ಕಟ್ಟಿಗೆ ಹೊರಲೇಬೇಕಲ್ಲ?

ಕನ್ನಡ ಬಾವುಟ ಹಾರಿಸಿದರೆ ಸಾಕು, ಚಿಂತೆಯಿಲ್ಲ

ಕನ್ನಡ ಬಾವುಟ ಹಾರಿಸಿದರೆ ಸಾಕು, ಚಿಂತೆಯಿಲ್ಲ

ಇದು ಬಹುಶಃ ಬೆಂಗಳೂರಿನ ಎಲ್ಲ ಮಾಲ್‌ಗಳು, ದೊಡ್ಡ ಹೋಟೆಲ್‌ಗಳು, ಐಟಿ ಕಂಪನಿಗಳು ಪಾಲಿಸಿಕೊಂಡು ಬರುತ್ತಿರುವ ಪರಿಪಾಠ. ಜೀವನಪರ್ಯಂತ ಒಂದು ಕನ್ನಡ ಪದವೂ ಸುಳಿಯಲು ಅವಕಾಶ ನೀಡದಿದ್ದರೂ ಕನ್ನಡಕ್ಕಾಗಿ ಹೋರಾಟ ಆರಂಭವಾದಾಗ ಮುಂದೆ ಒಂದು ಕನ್ನಡ ಬಾವುಟವನ್ನೋ, ಕನ್ನಡದಲ್ಲಿ 'ನಾವು ನಿಮ್ಮೊಂದಿಗಿದ್ದೇವೆ' ಎಂಬ ಬೋರ್ಡನ್ನೋ ತಗುಲಿಹಾಕಿಕೊಂಡುಬಿಡುವುದು. ಅಲ್ಲಿಗೆ ಕಲ್ಲೇಟು ಬೀಳಲ್ಲ ಎಂಬುದು ಖಾತ್ರಿಯಾಗಿರುತ್ತದೆ. ಮರುದಿನದಿಂದ ಇದ್ದೇ ಇದೆಯಲ್ಲ? ವಾಟ್ ಕ್ಯಾನ್ ಐ ಡೂ ಫಾರ್ ಯೂ?

ಬಂದ್ ದಿನ ಹೆಲ್ಮೆಟ್ ಧರಿಸುವುದು ನಿಷೇಧ

ಬಂದ್ ದಿನ ಹೆಲ್ಮೆಟ್ ಧರಿಸುವುದು ನಿಷೇಧ

ಬೇರೆ ಯಾವುದೇ ದಿನವಾಗಿದ್ದರೆ ಪೊಲೀಸಪ್ಪ ಇಷ್ಟೊತ್ತಿಗೆ ಹಿಡಿದು ಲೈಸೆನ್ಸ್ ಕೇಳಿ, ವಾಯುಮಾಲಿನ್ಯ ಪರೀಕ್ಷೆ ಸರ್ಟಿಫಿಕೇಟ್ ನೋಡಿ, ಇನ್ಶೂರೆನ್ಸ್ ಕಾಗದ ನೋಡಿ, ಎಲ್ಲ ಸರಿಯಾಗಿದೆ ಎಂದು ತಿಳಿದಾಗ, ಹೆಲ್ಮೆಟ್ ಯಾಕೆ ಹಾಕಿಲ್ಲ ಅಂತ ದಂಡ ವಿಧಿಸುತ್ತಿದ್ದ. ಆದರೆ, ಕರ್ನಾಟಕ ಬಂದ್ ದಿನದಂದು? ಹೇ, ಯಾರು ಕೇಳುತ್ತಾರೆ, ಬೈಕ್ ಮೇಲೇರಿದರೆ ನಾವು ಸಾಗಿದ್ದೇ ದಾರಿ. ಅಪಘಾತವಾಗುವ ಸಂಭವವೂ ಇಲ್ಲ, ಪೊಲೀಸರು ಹಿಡಿಯುವುದೂ ಇಲ್ಲ ಎಂಬ ಧೈರ್ಯ. ಕೈಯಲ್ಲಿ ಕನ್ನಡ ಬಾವುಟ ಹಿಡಿದು ಹೊರಟರೆ ಅವರಿಗೆ ಅವರೇ ರಾಜಾಧಿರಾಜ.

ಪೊಲೀಸರಿಗೆ ಬಂದ್ ಒಂದು ವಿಚಿತ್ರ ಸನ್ನಿವೇಶ

ಪೊಲೀಸರಿಗೆ ಬಂದ್ ಒಂದು ವಿಚಿತ್ರ ಸನ್ನಿವೇಶ

ಸಿಕ್ಕಾಪಟ್ಟೆ ಗಲಾಟೆಯಾದರೆ ಕೆರಕೊಳ್ಳುವುದಕ್ಕೂ ಪುರುಸೊತ್ತಿಲ್ಲದಂತೆ ಭರ್ತಿ ಕೆಲಸ, ಗಲಾಟೆ ಇಲ್ಲದಿದ್ದರಂತೂ ಛೆ, ಟೈಂ ಪಾಸಾದರೂ ಹೇಗೆ ಮಾಡುವುದು ಎಂಬಷ್ಟು ಬೇಜಾರು ಬರಿಸುವಷ್ಟು ಬಿಡುವು. ಏನೇ ಆಗಲಿ ಕರ್ತವ್ಯಕ್ಕಂತೂ ಹಾಜರಾಗಲೇಬೇಕು. ಕೈಯಲ್ಲಿರುವ ಲಾಠಿ ಮತ್ತು ತಲೆಯ ಮೇಲಿರುವ ಟೋಪಿಯನ್ನು ಪಕ್ಕಕ್ಕಿಟ್ಟು ಪೇಪರು ಕೈಯಲ್ಲಿ ಹಿಡಿದು ಕುಳಿತರೆ ಎಷ್ಟಾದರೂ ಓದುವುದು? ಹಾಗೇ ಗೋಡೆಗೊರಗಿ ಕಣ್ಣು ಮುಚ್ಚಿದರೆ ಆಹಾ ಎಂಥ ನಿದ್ದೆ! ಅಷ್ಟರಲ್ಲೇ ಕಾಲ್ ಬಂದಿರುತ್ತದೆ, ಹೆಂಡತಿಯಿಂದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+