ಅಕ್ಟೋಬರ್ ಗೆ ಸ್ಟಾರ್ ಬಕ್ಸ್ ಕಾಫಿ ಮೊದಲ ಸಿಪ್

ಸ್ಟಾರ್ ಬಕ್ಸ್ ತನ್ನ ಮೊದಲ ಕಾಫಿ ಶಾಪ್ ಅನ್ನು ಮುಂಬೈನ ಹಾರ್ನಿಮಾನ್ ಸರ್ಕಲ್ ಪ್ರದೇಶದಲ್ಲಿ ಆರಂಭಿಸಲಿದೆ ಎಂದು ಸಂಸ್ಥೆಯ ವಕ್ತಾರರು ಗುರುವಾರ(ಸೆ.27) ಘೋಷಿಸಿದೆ.
ಟಾಟಾ ಮೈತ್ರಿ ಕೂಟದಲ್ಲಿ ಸ್ಟಾರ್ ಬಕ್ಸ್ ಸೇರಿದ ಮೇಲೆ 2012ರಲ್ಲಿ ಸುಮಾರು 30 ರಿಂದ 50 ಮಳಿಗೆಗಳನ್ನು ಮೊದಲ ಹಂತದಲ್ಲಿ ಆರಂಭಿಸುವ ನಿರೀಕ್ಷೆಯಿದೆ. 3,000 ದಿಂದ 3,500 ಚ.ಅಡಿ ವಿಸ್ತೀರ್ಣದ ಮಳಿಗೆಗಳಲ್ಲಿ ಗ್ರಾಹಕರಿಗೆ ಕಾಫಿ ನೀಡಲು ಸ್ಟಾರ್ ಬಕ್ಸ್ ಯೋಜಿಸಿದೆ. ಈ ಜಂಟಿ ಯೋಜನೆಗೆ ಸುಮಾರು 400 ಕೋಟಿ ರು.ಗೂ ಅಧಿಕ ಮೊತ್ತ ಹೂಡಲಾಗಿದೆ.
ಈ ಜಂಟಿ ಒಪ್ಪಂದದ ಮೂಲಕ ಸ್ಟಾರ್ ಬಕ್ಸ್ ಪ್ರವೇಶಿಸುವ ಮುಹೂರ್ತದ ಸುದ್ದಿ ಹೊರಬೀಳುತ್ತಿದ್ದಂತೆ ಟಾಟಾ ಕಾಫಿ ಷೇರುಗಳು 137 ರು.ನಂತೆ ಶೇ 4.51 ರಷ್ಟು ಏರಿಕೆ ಕಂಡಿದೆ. ಅತ್ತ ನ್ಯಾಸ್ಡಾಕ್ ನಲ್ಲಿ ಸ್ಟಾರ್ ಬಕ್ಸ್ನ ಷೇರುಗಳು 0.95 ಡಾಲರ್ ನಂತೆ ಶೇ 1.9ರಷ್ಟು ಏರಿಕೆ ಕಂಡಿದೆ.
ಈ ಒಪ್ಪಂದದ ಜೊತೆಗೆ ತನ್ನ ಟೀ ಉತ್ಪನ್ನ 'ಟಾಟಾ ಟಾಜೊ' ಕ್ಕೆ ಕೂಡಾ ಪ್ರಚಾರ ನೀಡಲು ಟಾಟಾ ಸಂಸ್ಥೆ ಬಯಸಿದೆ. ರೀಟೈಲ್ ಮಾರುಕಟ್ಟೆಯಲ್ಲಿ ಅನೇಕ ಬದಲಾವಣೆಗಳು ಕಾಣುತ್ತಿರುವ ಸಂದರ್ಭದಲ್ಲಿ ರೀಟೈಲ್ ಜಗತ್ತಿನ ಆಳ ಕಂಡಿರುವ ಸ್ಟಾರ್ ಬಕ್ಸ್ ಪ್ರವೇಶ ಟಾಟಾ ಸಂಸ್ಥೆಗೆ ಲಾಭದಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಬಕ್ಸ್ ಬಗ್ಗೆ : ವಾಷಿಂಗ್ಟನ್ ನ ಸಿಯಾಟಲ್ ಮೂಲದ ಸ್ಟಾರ್ ಬಕ್ಸ್ ಕಾರ್ಪೋರೇಷನ್ ಸಂಸ್ಥೆ ಅಂತಾರಾಷ್ಟ್ರೀಯ ಕಾಫಿ ಕಂಪನಿಯಾಗಿದೆ. ವಿಶ್ವದ ಅತ್ಯಂತ ವಿಸ್ತಾರವಾದ ಕಾಫಿ ಶಾಪ್ ಜಾಲ ಹೊಂದಿರುವ ಸಂಸ್ಥೆ ಇದಾಗಿದ್ದು ಸುಮಾರು 17,000ಕ್ಕೂ ಅಧಿಕ ಕಾಫಿ ಶಾಪ್ ಜಗತ್ತಿನೆಲ್ಲೆಡೆ ಇದೆ. 1922ರಲ್ಲಿ ಸ್ಥಾಪಿತವಾದ ಈ ಕಂಪನಿ ಬಗ್ಗೆ ಹೆಚ್ಚಿನಮಾಹಿತಿಗೆ www.starbucks.com.












Click it and Unblock the Notifications