ಪ್ರಧಾನಿ ಪಟ್ಟಕ್ಕೆ ಸುಷ್ಮಾ ಎನ್ ಡಿಎ ಅಭ್ಯರ್ಥಿ

ಆದರೆ, ಬಾಳಾ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಯುನ ಶರದ್ ಯಾದವ್, ಠಾಕ್ರೆ ಅವರಿಗೆ ಅಸಂಬದ್ಧ ಹೇಳಿಕೆ ನೀಡುವುದು ನಿಲ್ಲಿಸಲಿ ಎಂದಿದ್ದಾರೆ.
ಶಿವಸೇನೆ ಮುಖವಾಣಿ 'ಸಾಮ್ನಾ' ನಲ್ಲಿ ಪ್ರಕಟವಾಗಿರುವ ಸುದೀರ್ಘ ಸಂದರ್ಶನದಲ್ಲಿ ಬಾಳಾ ಠಾಕ್ರೆ ತಮ್ಮ ಬೆಂಬಲವನ್ನು ಸುಷ್ಮಾ ಸ್ವರಾಜ್ ಅವರಿಗೆ ನೀಡುವುದಾಗಿ ಘೋಷಿಸಿದ್ದಾರೆ. ರಾಜಕೀಯವಾಗಿ ಜಾಣ್ಮೆ, ಕುಶಲತೆ, ಸಮತೋಲನ ಉಳ್ಳ ವ್ಯಕ್ತಿ ಎಂದರೆ ಸುಷ್ಮಾ ಸ್ವರಾಜ್ ಮಾತ್ರ. ಬಿಜೆಪಿಯಲ್ಲಿ ಮತ್ತೆ ಯಾವ ನಾಯಕನನ್ನು ನಾವು ಬೆಂಬಲಿಸುವ ಅಗತ್ಯವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ನಾನು ಈ ಹಿಂದೆ ಕೂಡಾ ಹಲವು ಬಾರಿ ಹೇಳಿದ್ದೇನೆ. ಸುಷ್ಮಾರಂಥ ಬುದ್ಧಿವಂತ ಮಹಿಳೆಯನ್ನು ಅಭ್ಯರ್ಥಿಯಾಗಿ ಬಿಂಬಿಸುವುದರಿಂದ ಬಿಜೆಪಿಗೆ ಒಳಿತು ಎಂದಿದ್ದೇನೆ.
ಇದೆ ಸಂದರ್ಭದಲ್ಲಿ ತಮ್ಮ ಬ್ಲಾಗಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ನಂತರ ಭವಿಷ್ಯ ನುಡಿದಿದ್ದ ಎಲ್ ಕೆ ಅಡ್ವಾಣಿ ಅವರ ಹೇಳಿಕೆಗಳನ್ನು ಠಾಕ್ರೆ ತಿರಸ್ಕರಿಸಿದ್ದಾರೆ. ಯುಪಿಎ, ಎನ್ ಡಿಎಯೇತರ ಸರ್ಕಾರ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಜನರ ಇಂಗಿತವನ್ನು ಅವರು ಹೇಗೆ ಗ್ರಹಿಸಿ ಹೇಳುತ್ತಾರೋ ನನಗಂತೂ ಗೊತ್ತಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಬಿಜೆಪಿ ಹಾಗೂ ಶಿವಸೇನೆ ಸಂಬಂಧ ಶಕ್ತಿಯುತವಾಗಿದೆ ಎನ್ನಲಾರೆ. ಪಕ್ಷದ ಮೈತ್ರಿಗಿಂತ ವೈಯಕ್ತಿಕ ಲಾಭದತ್ತ ಪಕ್ಷದ ಮುಖಂಡರು ಮನಸ್ಸು ಮಾಡಿದ್ದಾರೆ. ಎನ್ ಡಿಎನಲ್ಲಿ ವಾಜಪೇಯಿ ಅವರಂಥ ಸಮರ್ಥ ನಾಯಕರಿದ್ದರು.
ಈಗ ಸರಿಯಾದ ಮಾರ್ಗದರ್ಶಕರಿಲ್ಲದ್ದಂತಾಗಿದೆ. ನಾನು ಎನ್ ಡಿಎ ಬಗ್ಗೆ ಮಾತ್ರ ಮಾತನಾಡಬಲ್ಲೆ, ಬಿಜೆಪಿ ಬಗ್ಗೆ ಏನ್ನನ್ನೂ ಹೇಳಲಾರೆ ಎಂದು ಠಾಕ್ರೆ ತಿಳಿಸಿದ್ದಾರೆ.
"ನನ್ನ ಕೈಗೆ ಭಾರತದ ಭೂಸೇನೆಯ ಚುಕ್ಕಾಣಿ ಕೊಟ್ಟರೆ ಒಂದೇ ತಿಂಗಳಲ್ಲಿ ದೇಶದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಮತ್ತು ದಿಕ್ಕುತಪ್ಪಿದವರನ್ನು ಸರಿದಾರಿಗೆ ತರುತ್ತೇನೆ" ಎಂದು ಶಿವಸೇನೆಯ ಮುಖಂಡ, 86 ವರ್ಷದ ಹಳೆ ಹುಲಿ ಬಾಳಾ ಠಾಕ್ರೆ ಅವರು ಘರ್ಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)












Click it and Unblock the Notifications