ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಧಮ್ಕಿಗೆ ದಂಗಾದ ಸಿಎಂ ಶೆಟ್ಟರ್

By Prasad
|
Google Oneindia Kannada News

Angry Yeddyurappa threatens Jagadish Shettar
ಬೆಂಗಳೂರು, ಸೆ. 7 : ಯಡಿಯೂರಪ್ಪ ಮತ್ತೆ ಕೋಪದಿಂದ ಬುಸುಗುಡಲು ಪ್ರಾರಂಭಿಸಿದ್ದಾರೆ. ಬಿಜೆಪಿ ಹೈಕಮಾಂಡ್ ತಮ್ಮ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎನ್ನುವುದು ಈ ಬುಸುಗುಡುವಿಕೆಗೆ ಕಾರಣ ಒಂದಾದರೆ, ಮುಖ್ಯಮಂತ್ರಿಯ ಪಟ್ಟದ ಮೇಲೆ ಅವರೇ ಪ್ರತಿಷ್ಠಾಪಿಸಿರುವ 'ಲಿಂಗಾಯತ' ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಕೂಡ ಸದಾನಂದ ಗೌಡರ ಹಾದಿಯಲ್ಲಿ ಸಾಗುತ್ತಿರುವುದು ಎರಡನೇ ಕಾರಣ.

ಈ ಎಲ್ಲ ಬೆಳವಣಿಗೆಗಳಿಂದ ಕಂಗೆಟ್ಟಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಗುರುವಾರ ನೇರವಾಗಿ ಜಗದೀಶ್ ಶೆಟ್ಟರ್ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ, ತಮ್ಮನ್ನೇ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಗಾದಿಯ ಮೇಲೆ ಕುಳ್ಳಿರಿಸಲು ವಿಫಲರಾದರೆ ಮುಂದೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿಬಂದಿದ್ದಾರೆ.

ಯಡಿಯೂರಪ್ಪನವರ ಆಗಮನವನ್ನು ಮತ್ತು ಕ್ಷಣಕಾಲದ ಆವೇಶದ ನುಡಿಗಳನ್ನು ನಿರೀಕ್ಷಿಸದಿದ್ದ ಜಗದೀಶ್ ಶೆಟ್ಟರ್ ಬಾಯಿಯಿಂದ ಮಾತೇ ಹೊರಡಿಲ್ಲ. ಮಾತು ಹೊರಡುವುದಿರಲಿ, ಬಾಯಿ ತೆರೆಯುವ ಮೊದಲೇ ಎಚ್ಚರಿಕೆ ನೀಡಿದ ಯಡಿಯೂರಪ್ಪನವರು ಜಗದೀಶ್ ಶೆಟ್ಟರ್ ನಿವಾಸದಿಂದ ಬಂದಷ್ಟೇ ವೇಗವಾಗಿ ಹಿಂದಿರುಗಿದ್ದಾರೆ. ಹೀಗೆ ಎಚ್ಚರಿಕೆ ನೀಡುತ್ತಾರೆಂದು ಶೆಟ್ಟರ್ ಮಾತ್ರವಲ್ಲ ಯಾರು ಕೂಡ ನಿರೀಕ್ಷಿಸಿರಲಿಲ್ಲ.

ಯಡಿಯೂರಪ್ಪ ಕೆಂಡಾಮಂಡಲವಾಗಲು ಕಾರಣಗಳೂ ಇಲ್ಲದಿಲ್ಲ. ರಾಜ್ಯಾಧ್ಯಕ್ಷ ಪಟ್ಟದ ಬೇಡಿಕೆ ಮುಂದಿಟ್ಟುಕೊಂಡು ಕೆಲ ದಿನಗಳ ಹಿಂದೆ ದೆಹಲಿಗೆ ಹೋದಾಗ ಯಡಿಯೂರಪ್ಪನವರನ್ನು ಬಿಜೆಪಿಯ ಹಿರಿಯ ನಾಯಕರು ಕ್ಯಾರೆ ಅಂದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪಟ್ಟ ಕೊಡಿಸಬೇಕೆಂದು ದೆಹಲಿಯ ಹಿರಿಯ ನಾಯಕರೆದುರಿಗೆ ಲಾಬಿ ಮಾಡದೆ ತಟಸ್ಥರಾಗಿರುವುದು.

ಈ ನಿರ್ಬಂಧ ವಿಧಿಸಿಯೇ ಯಡಿಯೂರಪ್ಪನವರನ್ನು ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧ ಯುದ್ಧ ಸಾರಿದ್ದು ಮತ್ತು ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಪದವಿ ದೊರಕಿಸಿಕೊಟ್ಟಿದ್ದು. ಆದರೆ, ಬಿಎಸ್‌ವೈ ಅವರ ನಿರೀಕ್ಷೆಯನ್ನು ಹುಸಿಮಾಡಿದ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪನವರನ್ನು ನಿರ್ಲಕ್ಷಿಸುತ್ತಿರುವುದೇ ಯಡಿಯೂರಪ್ಪ ಬಾಲಸುಟ್ಟ ಬೆಕ್ಕಿನಂತೆ ಆಡಲು ಮುಖ್ಯ ಕಾರಣ.

ಶೆಟ್ಟರ್ ಅವರು ಮತ್ತು ಅವರ ಕಟ್ಟರ್ ಬೆಂಬಲಿಗರು ಯಡಿಯೂರಪ್ಪನವರಿಗೆ ತಾಳ್ಮೆಯಿಂದ ಇರಲು ವಿನಂತಿಸಿಕೊಂಡಿದ್ದಾರಾದರೂ, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಯಡಿಯೂರಪ್ಪ ಸದ್ಯಕ್ಕೆ ಇಲ್ಲ. ಲಾಬಿ ಮಾಡುವ ಬದಲಾಗಿ ಬರ ಪರಿಹಾರ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಶೆಟ್ಟರ್ ಅವರು ತೊಡಗಿಕೊಂಡಿರುವುದು ಯಡಿಯೂರಪ್ಪನವರನ್ನು ಬರಗೆಟ್ಟಂತೆ ಮಾಡಿದೆ. ಬರ ಪರಿಹಾರಕ್ಕಾಗಿ ಯಡಿಯೂರಪ್ಪ ಪ್ರವಾಸ ಕೈಗೊಳ್ಳುತ್ತಿದ್ದಾರಾದರೂ ಅವರ ಒಂದು ಕಣ್ಣು ರಾಜ್ಯಾಧ್ಯಕ್ಷ ಪಟ್ಟದ ಮೇಲೆಯೇ ಇದೆ.

English summary
Former chief minister B.S. Yeddyurappa barged into the resident of Chief Minister Jagadish Shettar and threatened him to face consequences if he does not lobby for him for BJP President post. Shettar was stunned and wordless.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X