ಬೆತ್ತನಗೆರೆ ಸೀನ ಪೊಲೀಸ್ ಎನ್ಕೌಂಟರ್ ಗೆ ಔಟ್

ಬೆತ್ತನಗೆರೆ ಸೀನ (38) ಮಾಗಡಿ ರಸ್ತೆ ಹೇರೋಹಳ್ಳಿ ಬಳಿ ಸಿಂಡಿಕೇಟ್ ಲೇಔಟ್ ನ ಮನೆಯಲ್ಲಿದ್ದಾನೆ ಎಂಬ ಖಚಿತ ಮಾಹಿತಿಯ ಬೆನ್ನೇರಿದ ಬೆಂಗಳೂರು ಗ್ರಾಮಾಂತರ ಪೊಲೀಸರು ಶುಕ್ರವಾರ ಬೆಳಗಿನ ಜಾವ 5 ಗಂಟೆಯಲ್ಲಿ ಈ ದಾಳಿ ನಡೆಸಿದ್ದಾರೆ.
ಎಎಸ್ ಪಿ ನಾಗರಾಜ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ಪೊಲೀಸರು ದಾಳಿ ಮಾಡಿದ ಸುಳಿವರಿತ ಬೆತ್ತನಗೆರೆ ಸೀನ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸರೂ ಗುಂಡಿನ ದಾಳಿ ಮಾಡಿದಾಗ ಸೀನ ಸ್ಥಳದಲ್ಲೇ ಶೂಟೌಟ್ ಆಗಿದ್ದಾನೆ. ನಂದಗುಡಿ ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ ಹಾರಿಸಿದ ಗುಂಡು ತಗುಲಿ ಬೆತ್ತನಗೆರೆ ಸೀನ ಸ್ಥಳದಲ್ಲೇ ಹತನಾದ ಎಂದು ತಿಳಿದುಬಂದಿದೆ.
ಗುಂಡಿನ ಚಕಮಕಿಯಲ್ಲಿ ಆತನ ಇಬ್ಬರು ಸಹಚರರಿಗೂ ಗಾಯಗಳಾಗಿವೆ. ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಸೀನನ ಶವ ಇಡಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ಬೆತ್ತನಗೆರೆ ಸೀನನಿಗೆ ಅಶ್ರಯ ನೀಡಿದ್ದ ಆರೋಪದ ಮೇಲೆ ಸೀನ ಅಡಗಿಕೊಂಡಿದ್ದ ಮನೆಯ ಮಾಲೀಕ ಮಂಜುನಾಥನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜುಲೈನಲ್ಲಿ ಕೃಷ್ಣಪ್ಪನ ಕೊಲೆ ಪ್ರಕರಣ ಸೇರಿದಂತೆ ಒಟ್ಟಾರೆ 9 ಕೊಲೆ ಪ್ರಕರಣಗಳಲ್ಲಿ ಮೃತ ಬೆತ್ತನಗೆರೆ ಸೀನ ಪೊಲೀಸರಿಗೆ ಬೇಕಾಗಿದ್ದ ಎಂದು ಐಜಿಪಿ ಅಮರನಾಥ ಪಾಂಡೆ ತಿಳಿಸಿದ್ದಾರೆ.
ಬೆತ್ತನಗೆರೆ ಸೀನನ ತಂಡವು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಸದಸ್ಯ, ಜೆಡಿಎಸ್ ಧುರೀಣ, ಭೂಮಾಫಿಯಾ ಡಾನ್ ಬೆಮೆಲ್ ಕೃಷ್ಣಪ್ಪ(55)ನನ್ನು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೆಲಮಂಗಲದ ದಾಸನಪುರದ ಬಳಿ ಗುಂಡಿಕ್ಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ಜುಲೈ 25ರ ಬುಧವಾರ ಸಂಜೆ 8.45ರ ಸುಮಾರಿಗೆ ಭೀಕರವಾಗಿ ಹತ್ಯೆ ಮಾಡಿತ್ತು.
ತನ್ನ ಬಾಡಿಗಾರ್ಡ್ ಜೊತೆ ಕಾರಿನಲ್ಲಿ ನೆಲಮಂಗಲದಲ್ಲಿರುವ ನಿವಾಸಕ್ಕೆ ತೆರಳುತ್ತಿದ್ದಾಗ ಟೆಂಪೋ ಟ್ರಾವಲರ್‌ನಲ್ಲಿದ್ದ 30ಕ್ಕೂ ಹೆಚ್ಚು ರೌಡಿಗಳು ಅರಿಶಿನಕುಂಟೆಯಲ್ಲಿ ಅಡ್ಡಗಟ್ಟಿ ದಾಳಿ ಮಾಡಿದ್ದರು.
ಕೃಷ್ಣಪ್ಪ ಯಾರು? : ನೆಲಮಂಗಲದಲ್ಲಿ ಮತ್ತು ಸುತ್ತಮುತ್ತಿನ ಹಳ್ಳಿಗಳಲ್ಲಿ ಭೂಮಾಫಿಯಾ ರೌಡಿಗಳದೇ ಸಾಮ್ರಾಜ್ಯ. ರಿಯಲ್ ಎಸ್ಟೇಟ್ ಏಜೆಂಟರುಗಳು ತಮ್ಮ ಕೈಚಳಕ ತೋರಿಸಿ ಸಾಕಷ್ಟು ಭೂಮಿಯನ್ನು ಕಬಳಿಸಿಕೊಂಡಿದ್ದ. ಅವರೆಲ್ಲರ ಕಿಂಗ್ ಬೆಮೆಲ್ ಕೃಷ್ಣಪ್ಪ. ನೆಲಮಂಗಲದ ಹೊರವಲಯದಲ್ಲಿ ಪೆಟ್ರೋಲ್ ಬಂಕ್ ಇಟ್ಟಿದ್ದ ಕೃಷ್ಣಪ್ಪ, ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತನ್ನ ಕಬಂಧ ಬಾಹುವನ್ನು ಚಾಚಿದ್ದ. ಮೂರು ವರ್ಷಗಳ ಹಿಂದೆ 2009ರ ಆಗಸ್ಟ್ 24ರಂದು ಕೂಡ ಕೃಷ್ಣಪ್ಪನ ಮೇಲೆ ವೈರಿ ಗ್ಯಾಂಗ್ ಹತ್ಯೆಗೆ ಯತ್ನಿಸಿತ್ತು.












Click it and Unblock the Notifications