ಬರ ಪ್ರವಾಸ: ಯಡಿಯೂರಪ್ಪ ಬಿಜೆಪಿಯ ದಂಡನಾಯಕ

ಯಡಿಯೂರಪ್ಪ ವಿರುದ್ಧ ಸುಖಾಸುಮ್ಮನೆ ರೋಷಾವೇಶಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಇದನ್ನು ಜೀರ್ಣಿಸಿಕೊಳ್ಳಲು ತುಸು ಕಷ್ಟಸಾಧ್ಯವಾಗಬಹುದಾದರೂ ನಿನ್ನೆ ಯಡಿಯೂರಪ್ಪ ಅವರು ಪಕ್ಷದ ಅತಿರಥಮಹಾರಥ ನಾಯಕ ಮಧ್ಯೆ ವಿಜೃಂಭಿಸಿದ್ದು ಸುಳ್ಳಲ್ಲ.
ಖುದ್ದು ಸಿಎಂ ಜಗದೀಶ್ ಶೆಟ್ಟರ್ ಪಕ್ಕದಲ್ಲೇ ನಿಂತಿದ್ದರೂ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವುದನ್ನು ನೋಡಿದರೆ ತಾವು ಸೂಪರ್ ಸಿಎಂ ಎಂಬುದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸಾದರಪಡಿಸಿದಂತಿತ್ತು.
ಇದರಿಂದ, ಮತ್ತೊಬ್ಬ ಯಡಿಯೂರಪ್ಪ ವಿರೋಧಿ ಅನಂತಕುಮಾರ್ ಜತೆಸೇರಿ ತಾವೂ ಸಹ ಬರ ಪ್ರವಾಸ ಮಾಡುವ ಮೂಲಕ ಯಡಿಯೂರಪ್ಪಗೆ ಮಗ್ಗುಲುಮುಳ್ಳಾಗುವ ಸದಾನಂದರ ಇರಾದೆಗೆ ಯಡಿಯೂರಪ್ಪ ಭಾರಿ ಪೆಟ್ಟುಕೊಟ್ಟಿದ್ದಾರೆ ಎನ್ನಬಹುದು.
ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದವನ್ನೂ ಹೊತ್ತು ಯಡಿಯೂರಪ್ಪ ತಮ್ಮ ಗುರಿ ಸಾಧನೆಗಾಗಿ ದಾಪುಗಾಲು ಹಾಕಿದ್ದಾರೆ. ಇದರಿಂದ ಸದಾನಂದರು ತಮ್ಮ ಬರ ಪ್ರವಾಸದಿಂದ ಹಿಂಜರಿದಿರಲೂಬಹುದು.
ಬಿಜೆಪಿ ದಂಡಿನ ಮಧ್ಯೆ ದಂಡನಾಯಕ: ಹಾಗೆ ನೋಡಿದರೆ ಬರ ಪ್ರವಾಸ ತಂಡದಲ್ಲಿ ಬಿಜೆಪಿ ದಂಡೇ ನೆರೆದಿದೆ. ಅವರ ಮಧ್ಯೆ ದಂಡನಾಯಕನಂತೆ ಯಡಿಯೂರಪ್ಪ ಕಂಗೊಳಿಸಿದ್ದಾರೆ - 'ನಿಮಗೇನು ಬೇಕು ನನ್ನನ್ನು ಕೇಳಿ. ಸರಕಾರದ ಕಡೆಯಿಂದ ಅದನ್ನೆಲ್ಲ ಕ್ಷಣಾರ್ಧದಲ್ಲಿ ನಾನು ಮಾಡಿಸಿಕೊಡುವೆ. ಇದು ರಾಜಕೀಯ ಪ್ರವಾಸವಲ್ಲ. ರೈತನಿಗಾಗಿ ಮಿಡಿಯುತ್ತಿರುವೆ' ಎಂದು ಇಡೀ ರೈತ ಸಂಕುಲವನ್ನು ಅವರು ತಮ್ಮ ತೆಕ್ಕೆಗೆ ತೆಗೆದುಕೊಂಡತ್ತಿತ್ತು.
ಗೋಶಾಲೆಗೆ ಬರುವ ರೈತರಿಗೆ ರಾತ್ರಿ ಊಟದ ವ್ಯವಸ್ಥೆ ಮಾಡುವಂತೆ ಚಿಕ್ಕತೊಟ್ಲುಕೆರೆ ಗೋಶಾಲೆಯ ರೈತರೊಬ್ಬರ ಮನವಿ ಮಾಡಿದರು. ಈ ಅವಕಾಶವನ್ನು ಯಡಿಯೂರಪ್ಪ ಸಮರ್ಥವಾಗಿ ಬಳಸಿಕೊಂಡರು. 'ನಾಳೆಯಿಂದಲೇ ಗೋಶಾಲೆಗಳಲ್ಲಿ ರಾತ್ರಿ ಊಟ ಆರಂಭಿಸಲಾಗುವುದು.
ಈ ಬಗ್ಗೆ ಸಂಜೆಯೇ ಮುಖ್ಯಮಂತ್ರಿ ಜತೆ ಮಾತನಾಡುವೆ' ಎಂದು ಅಭಯ ನೀಡಿದರು. ಬರದ ಹಿನ್ನೆಲೆಯಲ್ಲಿ ರೈತನ ಪರವಾಗಿ ಸರಕಾರದ ವತಿಯಿಂದ ಈಗಾಗಲೇ ಅನೇಕ ಯೋಜನೆಗಳನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗಿರುವ ಯಡಿಯೂರಪ್ಪ ಇಲ್ಲೂ ಅದೇ ಛಾತಿಯನ್ನು ತೋರಿದ್ದಾರೆ.
ಕೆಲವು ಕಡೆಗಳಲ್ಲಿ ರೈತರನ್ನು ಕರೆದು ಕಷ್ಟ ಸುಖ ವಿಚಾರಿಸಿಕೊಂಡ ಯಡಿಯೂರಪ್ಪ ಕೂಲಿ ಕೆಲಸ ಕೊಟ್ಟರೆ ಯಾಕೆ ಬರುತ್ತಿಲ್ಲ ಎಂದು ಕೇಳಿದರು. ಅದಕ್ಕೆ 'ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕಡಿವೆುಯಿದೆ' ಎಂದು ರೈತರು ದೂರಿದರು. ಅದಕ್ಕೆ 'ಉದ್ಯೋಗ ಖಾತ್ರಿಯ ಕೂಲಿ ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿಯೂ' ಅವರು ಭರವಸೆ ನೀಡಿದರು.












Click it and Unblock the Notifications