ಮಹಾರಾಷ್ಟ್ರದ ಮಾಜಿ ಸಿಎಂ ವಿಲಾಸ್ ರಾವ್ ದೇಶ್ ಮುಖ್ ಇನ್ನಿಲ್ಲ

ಯಕೃತ್ತಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ವಿಲಾಸ್ ರಾವ್ ದೇಶ್ ಮುಖ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಖ್ಯಾತ ಸರ್ಜನ್ ಡಾ ಮಹಮ್ಮದ್ ರೇಲಾ ಅವರು ಮಧ್ನಾಹ್ನ 1.30 ಸುಮಾರಿಗೆ ವಿಲಾಸ್ ರಾವ್ ಅವರು ಇಹಲೋಕ ತ್ಯಜಿಸಿದ ಕಹಿ ವಾರ್ತೆಯನ್ನು ಅವರ ಕುಟುಂಬ ವರ್ಗಕ್ಕೆ ನೀಡಿದರು.
ಚೆನ್ನೈನ ಪೆರಂಬಾಕ್ಕಂನಲ್ಲಿರುವ ಗ್ಲೋಬಲ್ ಆಸ್ಪತ್ರೆಯಲ್ಲಿ ಆ.7 ರಿಂದ ವಿಲಾಸ್ ರಾವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದಕ್ಕೂ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಲಾತೂರಿನ ಮರಾಠಿ ನಾಯಕ ವಿಲಾಸ್ ರಾವ್ ದೇಶ್ ಮುಖ್ ಅವರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿದ್ದ ವಿಲಾಸ್ ರಾವ್ ದೇಶ್ ಮುಖ್ ಅವರು ಐಪಿಎಲ್ ಸಂದರ್ಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ಮೈದಾನದ ಸಿಬ್ಬಂದಿ ಜೊತೆ ಕಿತ್ತಾಡಿದ ಪ್ರಸಂಗವನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದರು. ಎಂಸಿಎ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಶಾರುಖ್ ಖಾನ್ ಗೆ ನಿಷೇಧ ಹೇರುವ ನಿರ್ಣಯ ಕೈಗೊಂಡು ಮರಾಠಿಗರ ಹಿತ ಕಾಯ್ದಿದ್ದರು.
ಮೇ 26, 1945ರಲ್ಲಿ ಲಾತೂರ್ ಜಿಲ್ಲೆಯ ಬಭಾಲ್ಗಾಂವ್ ನಲ್ಲಿ ಜನಿಸಿದ ವಿಲಾಸ್ ರಾವ್ ಅವರು ಬಿಎಸ್ಸಿ, ಬಿಎ, ಎಲ್ ಎಲ್ ಬಿ ಪದವೀಧರರಾಗಿದ್ದರು. ಮೃತರು ಪತ್ನಿ ವೈಶಾಲಿ ದೇಶ್ ಮುಖ್ ಹಾಗೂ ಮೂವರು ಪುತ್ರರಾದ ಅಮಿತ್ ದೇಶ್ ಮುಖ್ (ಲಾತೂರು ಶಾಸಕ), ರಿತೇಶ್ (ಸಿನಿಮಾ ನಟ) ಹಾಗೂ ಧೀರಜ್ ಅವರನ್ನು ಅಗಲಿದ್ದಾರೆ.
ವಿಲಾಸ್ ರಾವ್ ದೇಶ್ ಮುಖ್ ಅವರ ಪುತ್ರ ಅಮಿತ್ ದೇಶ್ ಮುಖ್ ಅವರು ಬೆಂಗಳೂರು ಮೂಲದ ಮರಾಠಿ ಬೆಡಗಿ ಅದಿತಿ ಘೋರ್ಪಡೆ ಅವರನ್ನು 2008ರಲ್ಲಿ ವಿವಾಹವಾಗಿದ್ದಾರೆ.
ಬೆಳಗಾವಿ ಬಗ್ಗೆ ವಿಲಾಸ್ ರಾವ್: 2007ರಲ್ಲಿ ಬೆಳಗಾವಿ ನಗರ ಪಾಲಿಕೆಯನ್ನು ವಜಾ ಮಾಡಿದ ಕರ್ನಾಟಕ ಸರ್ಕಾರದ ಕ್ರಮವನ್ನು ವಿಲಾಸರಾವ್ ಖಂಡಿಸಿದ್ದರು. ಮರಾಠಿಗರ ಭಾವನೆಗಳ ಅರ್ಥಮಾಡಿಕೊಂಡಿಲ್ಲ. ಆದರೂ ಈ ಭಾಗದಲ್ಲಿ ಗಡಿ ಹೋರಾಟವನ್ನು ಮರಾಠಿಗರು ಮುಂದುವರೆಸಿರುವುದು ನಿಜಕ್ಕೂ ಸ್ವಾಗತಾರ್ಹ.
ಇದು ವಿಶ್ವದಲ್ಲೇ ಅಪರೂಪದ ಹೋರಾಟ. ಬೆಳಗಾವಿಯಲ್ಲಿ ಮರಾಠಿ ಭಾಷಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕೂಡಲೇ ಮಹಾರಾಷ್ಟ್ರದಲ್ಲಿ ಬೆಳಗಾವಿಯನ್ನು ವಿಲೀನಗೊಳಿಸಬೇಕು. ಇದು ಸಹಜ ಪ್ರಕ್ರಿಯೆ. ಇದು ವಿಶ್ವದಲ್ಲಿನ ಸಹಜ ನಿಯಮ ಎಂದು ದೇಶ್ ಮುಖ್ ಹೇಳಿದ್ದರು.












Click it and Unblock the Notifications