ಬಿಂದ್ರಾಗೆ ಸೋಲು, ಸಂಖ್ಯಾಶಾಸ್ತ್ರಜ್ಞರಿಗೆ ತಗಡಿನ ಮೆಡಲ್
ಲಂಡನ್, ಜು.30: ಒಲಿಂಪಿಕ್ಸ್ 2012 ಶೂಟಿಂಗ್ ನಿಂದ ಅಭಿನವ್ ಬಿಂದ್ರಾ ಹೊರ ಬಿದ್ದಿದ್ದಾರೆ. ಬೀಜಿಂಗ್ ಒಲಿಂಪಿಕ್ಸ್ ಹೀರೋ ಶೂಟರ್ ಅಭಿನವ್ ಬಿಂದ್ರಾ ಅಮೋಘ ಪ್ರದರ್ಶನ ನೀಡುತ್ತಾರೆ ಎಂಬ ಸಂಖ್ಯಾಶಾಸ್ತ್ರಜ್ಞರ ಭವಿಷ್ಯ ಸುಳ್ಳಾಗಿದೆ.
ಬಿಂದ್ರಾ ಕಳಪೆ ಪ್ರದರ್ಶನ ನೀಡಿ ಅರ್ಹತಾ ಸುತ್ತಿನಲ್ಲಿ 16 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಆದರೆ, ಸೋಮವಾರ (ಜು.30) ಸಂಜೆ ನಡೆಯಲಿರುವ ಫೈನಲ್ ಪಂದ್ಯಕ್ಕೆ ಮತ್ತೊಬ್ಬ ಶೂಟರ್ ಗಗನ್ ನಾರಂಗ್ ಆಯ್ಕೆಯಾಗಿ ಕ್ರೀಡಾಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದಾರೆ.
ಸಂಖ್ಯಾಶಾಸ್ತ್ರದ ಪ್ರಕಾರ 28/09/1982 ರಂದು ಜನಿಸಿರುವ ಅಭಿನವ್ ಬಿಂದ್ರಾ ಅವರ ಜನ್ಮ ದಿನಾಂಕದ ಮೇಲೆ ಸೂರ್ಯ ಹಾಗೂ ಗುರು(1 ಹಾಗೂ 3 ನೇ ಸ್ಥಾನ) ಬಲ ಹೆಚ್ಚಾಗಿದೆ. ಸೋಮವಾರದ ದಿನಾಂಕ 30/07/2012 ಇದರ ಮೊತ್ತ 5 ಆಗಲಿದ್ದು, ಇದು ಬಿಂದ್ರಾ ಶುಭಕರವಾಗಿದೆ ಎಂದು ಜ್ಯೋತಿಷಿಗಳು ಹೇಳಿದ್ದರು.
ಆರಂಭದಿಂದಲೂ ಗಗನ್ ನಾರಂಗ್ ಉತ್ತಮ ಪ್ರದರ್ಶನ ನೀಡಿ ಒಟ್ಟಾರೆ 598/600 ಕಲೆ ಹಾಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಚೀನಾದ ಸ್ಪರ್ಧಿ ಕೂಡಾ 3598 ಅಂಕ ಗಳಿಸಿದ್ದಾರೆ. ಬಿಂದ್ರಾ 594 ಅಂಕ ಗಳಿಸಿ 16ನೇ ಸ್ಥಾನ ಗಳಿಸಿ ಅರ್ಹತೆ ಪಡೆಯುವಲ್ಲಿ ವಿಫಲರಾದರು. [ ಜು.30 ಒಲಿಂಪಿಕ್ಸ್: ಭಾರತದ ಚಿನ್ನದ ಬೇಟೆ ಆರಂಭ] | [ಜು.29: ಭಾರತದ ಸಾಧನೆ]
ನಾರಂಗ್ 10 ಅಂಕಗಳ 53 ಶಾಟ್ ಹೊಡೆದರೆ ಬಿಂದ್ರಾ 45 ಶಾಟ್ ಹೊಡೆದಿದ್ದರು. ಪುರುಷರ 10 ಮೀ ಏರ್ ರೈಫಲ್ ಅರ್ಹತಾ ಸುತ್ತಿನ ಪಂದ್ಯಾವಳಿಯ ಮೊದಲ ಸರಣಿಯಲ್ಲಿ ಬಿಂದ್ರಾ 99 ಅಂಕಗಳಿಸಿದ್ದರು. 10 ಪ್ರಯತ್ನದಲ್ಲಿ 9 ಬಾರಿ 10 ಅಂಕ ಒಂದು ಬಾರಿ 9 ಅಂಕ ಗಳಿಸಿ 99/100 ಗಳಿಸಿ ಭರ್ಜರಿ ಪ್ರದರ್ಶನ ನೀಡುವ ಸೂಚನೆ ನೀಡಿದರೂ ಕೊನೆ ಹಂತದಲ್ಲಿ ವಿಫಲರಾದರು.
ಅರ್ಹತಾ ಸುತ್ತಿನ ನಂತರ ಮೊದಲ 8 ಆಟಗಾರರು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಫೈನಲ್ ಪಂದ್ಯ ಸೋಮವಾರ ಸಂಜೆ ನಡೆಯಲಿದೆ. 54 ಸ್ಪರ್ಧಿಗಳು ಅರ್ಹತಾ ಸುತ್ತಿನಲ್ಲಿದ್ದರು. ಆರಂಭ 47 ಸ್ಪರ್ಧಿಗಳು ಮಾತ್ರ ಕಣಕ್ಕಿಳಿದಿದ್ದರು.
ಕ್ರೀಡಾಭಿಮಾನಿಗಳ ದುರುದೃಷ್ಟಕ್ಕೆ ಯಾವ ಚಾನೆಲ್ ನಲ್ಲೂ ಶೂಟಿಂಗ್ ಸ್ಪರ್ಧೆಯ ಅರ್ಹತಾ ಸುತ್ತಿನ ಲೈವ್ ಪ್ರಸಾರ ನೋಡುವ ಭಾಗ್ಯ ಸಿಕ್ಕಿರಲಿಲ್ಲ. ಫೈನಲ್ಸ್ 4.45ಕ್ಕೆ ಆರಂಭವಾಗಲಿದೆ.
ಗಗನ್ ನಾರಂಗ್ ಅವರು ಯಾವುದಾದರೂ ಒಂದು ಪದಕವನ್ನಾದರೂ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಇಟಲಿಯ ನಿಕ್ಕೊಲೊ ಕಂಪ್ರಿಯಾನಿ ಹಾಗೂ ರೊಮೆನಿಯಾದ ಅಲಿನ್ ಜಾರ್ಜ್ ಮೊಡೊವೆನು ಇಬ್ಬರು 600ಕ್ಕೆ 599 ಅಂಕಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.












Click it and Unblock the Notifications