ಯುವತಿಯನ್ನು ರೈಲಿಂದ ತಳ್ಳಿದ ಯುವಕರ ಮೇಲೆ ಹಲ್ಲೆ

ಬಂಧಿತರಾದ ಅಕ್ಬರ್, ಇಬ್ರಾಹಿಂ ಮತ್ತು ಅಮ್ಜದ್ ಎಂಬ ಯುವಕರನ್ನು ಬುಧವಾರ ವಿಚಾರಣೆಗೆ ಒಳಪಡಿಸಿ ರೈಲ್ವೆ ಇಲಾಖೆಯ ಪೊಲೀಸರು ಯುವತಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆಯೊಯ್ಯಲು ಒಯ್ಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ 20ಕ್ಕೂ ಹೆಚ್ಚು ಹಿಂದೂ ಜಾಗರಣ ಸಮಿತಿ ಕಾರ್ಯಕರ್ತರು ಆರೋಪಿಗಳನ್ನು ಮನಬಂದಂತೆ ಹೊಡೆದಿದ್ದಾರೆ.
ಪೊಲೀಸರು ಅಡ್ಡ ಬರಲು ಯತ್ನಿಸಿದರೂ ಬಿಡದ ಕಾರ್ಯಕರ್ತರು ಅವರನ್ನು ಜೀಪಿಗೆ ಹಾಕಿಕೊಳ್ಳಲು ಕೂಡ ಬಿಡದೆ ಥಳಿಸಿದ್ದಾರೆ. "ಹಿಂದೂ ಸಹೋದರಿಯ ಮೇಲೆ ಹಲ್ಲೆ ಮಾಡ್ತೀರಾ, ನಿಮ್ಮಂಥವರನ್ನು ಬಿಡಬಾರದು, ಎಷ್ಟೋ ಧೈರ್ಯ ನಿಮಗೆ..." ಎಂಬಿತ್ಯಾದಿ ಬೈಗುಳಗಳನ್ನು ಆಡುತ್ತ ಕಂಡಕಂಡಲ್ಲಿ ಬಾರಿಸಿದ್ದಾರೆ. ಹೊಡೀಬೇಡಿ ಹೊಡೀಬೇಡಿ ಎಂದು ಅವರು ಕಣ್ಣೀರುಗರೆಯುತ್ತಿದ್ದರೂ ಬಿಡದೆ ಜೀಪಿಗೆ ನುಗ್ಗಿ ಮುಖಮೂತಿ ನೋಡದೆ ರಕ್ತಬರುವಂತೆ ಝಾಡಿಸಿದ್ದಾರೆ.
ಬೆಂಗಳೂರಿನ ಹಿಂದೂಜಾ ಗಾರ್ಮೆಂಟ್ಸ್ ಕಂಪನಿಯಲ್ಲಿ ಶಿಂಪಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಮೈಸೂರಿಗೆ ತೆರಳುತ್ತಿದ್ದಾಗ, ಅಶ್ಲೀಲ ಮಾತನಾಡುತ್ತ ಲೈಂಗಿಕವಾಗಿ ದಬ್ಬಾಳಿಕೆಯನ್ನು ಈ ಯುವಕರು ನಡೆಸಿದ್ದರು. ಪೊಲೀಸರಿಗೆ ದೂರು ನೀಡುವುದಾಗಿ ಯುವತಿ ಬೆದರಿಸಿದಾಗ ಆಕೆಯನ್ನು ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಯುವಕರು ತಳ್ಳಿಬಿಟ್ಟಿದ್ದಾರೆ. ಯುವತಿಯ ಕಾಲು, ಬೆನ್ನು ಮೂಳೆಗಳು ಮುರಿದಿದ್ದು ಮದ್ದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಯುವತಿಯನ್ನು ರೈಲಿನಿಂದ ತಳ್ಳಿದ ಮೇಲೆ ಒದ್ದಾಡುತ್ತ ಬಿದ್ದಿದ್ದ ಯುವತಿಯನ್ನು ನೋಡಿ ಅಲ್ಲಿದ್ದವರು ಮುಸ್ಲಿಂ ಕೋಮಿಗೆ ಸೇರಿದ ಯುವಕರನ್ನು ಥಳಿಸಿದ್ದಾರಾದರೂ ದುರ್ಘಟನೆ ಸಂಭವಿಸಿಹೋಗಿತ್ತು. ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಅವರನ್ನು ವಿಚಾರಣೆ ನಡೆಸಿ ಕರೆದೊಯ್ಯುತ್ತಿದ್ದಾಗ ಆಕ್ರೋಶಗೊಂಡಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ದುರುಳರ ಮೇಲೆ ಮುಗಿಬಿದ್ದಿದ್ದಾರೆ. ಅವರನ್ನು ಪಾರುಮಾಡಿ ಅಲ್ಲಿಂದ ಕರೆದೊಯ್ಯಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಪ್ರಮೋದ್ ಮುತಾಲಿಕ್ ಬೆಂಬಲ : ನಮ್ಮ ಹಿಂದೂ ಸಹೋದರಿಗೆ ಆದ ಅನ್ಯಾಯಕ್ಕೆ ಪ್ರತಿಯಾಗಿ ಹಿಂದೂ ಸಂಘಟಕರು ಸಹಜವಾಗಿ ಆಕ್ರೋಶಗೊಂಡಿದ್ದಾರೆ. ಮುಸ್ಲಿಂ ಅಕ್ಕತಂಗಿಯರಿಗೆ ಹೀಗೆ ಆಗಿದ್ದರೆ ಅವರು ಸುಮ್ಮನಿರುತ್ತಿದ್ದರಾ ಎಂದು ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಹಿಂದೂ ಜಾಗರಣ ಸಮಿತಿ ಕಾರ್ಯಕರ್ತರನ್ನು ಬೆಂಬಲಿಸಿದ್ದಾರೆ.
ಇಂತಹ ಅನೇಕ ಪ್ರಕರಣಗಳನ್ನು ಮುಸ್ಲಿಂ ಯುವಕರ ಮೇಲೆ ಹೇರಲಾಗಿದೆ. ಆದರೆ, ಪೊಲೀಸರು ಏನೂ ಮಾಡುವುದಿಲ್ಲ. ಮುಸ್ಲಿಂರ ದಬ್ಬಾಳಿಕೆಗೆ ಅಡೆತಡೆ ಇಲ್ಲವೇ ಇಲ್ಲ, ಅವರಿಗೆ ಶಿಕ್ಷೆ ಆಗುವುದೂ ಇಲ್ಲ. ಅಂಥವರನ್ನು ಬಂಧಿಸುವ ಸಮಯದಲ್ಲಿಯೇ ಅವರನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ ಎಂದು ಪ್ರಮೋದ್ ಮುತಾಲಿಕ್ ಕೆಂಡ ಕಾರಿದರು. ಈ ಘಟನೆಗೆ ಅನೇಕ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
15 ನ್ಯಾಯಾಂಗ ಬಂಧನ : ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಗಳ ಮೇಲೆ ಹಲ್ಲೆ ಮಾಡಿದ ಮೇಲೆ ಅವರನ್ನು ಮದ್ದೂರು ಜೆಎಮ್ಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.












Click it and Unblock the Notifications