ಗ್ರಾಹಕನಿಂದ ಬಾಡಿಗೆ ತಾಯಿ ಅಪಹರಣ ಅತ್ಯಾಚಾರ

ಘಟನೆಯ ಬಳಿಕ, 30 ವರ್ಷದ ಬಾಧಿತ ತಾಯಿಯನ್ನು ಇಲ್ಲಿನ ಕಾರಂಜ್ ಪ್ರದೇಶದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯು ಪೊಲೀಸ್ ಪೇದೆಯೊಬ್ಬರ ಪುತ್ರನಾಗಿದ್ದು, ಅವನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ 30 ವರ್ಷದ ರಾಜಕುಮಾರ್ ಜಾದವ್ ನಾಡಿಯಾಡ್ ನಿವಾಸಿ.
ಬಾಧಿತ ಮಹಿಳೆಯು ಅಹಮದಾಬಾದಿನವರು. ಆರೋಪಿ ರಾಜಕುಮಾರ್ ಆಕೆಯನ್ನು ಅಪಹರಿಸಿ, ನಾಡಿಯಾಡ್ ನಲ್ಲಿರುವ ತನ್ನ ಮನೆಯಲ್ಲಿ ಕೂಡಿಹಾಕಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯ ದೂರನ್ನು ಆಧರಿಸಿ, ಪೊಲೀಸರು ಹೇಳಿದ್ದಾರೆ.
2010ರಲ್ಲಿ ಏನಾಯಿತೆಂದರೆ ನಾಡಿಯಾಡ್ ನಲ್ಲಿರುವ ವೈದ್ಯರೊಬ್ಬರು ಬಾಧಿತ ಮಹಿಳೆಯನ್ನು ಸಂಪರ್ಕಿಸಿ, 'ರಾಜಕುಮಾರ್ ಎಂಬುವವರು ನಿಮ್ಮ ಸೇವೆ ಬಯಸಿದ್ದು, ಅವರ ಮಗುವಿಗೆ ಬಾಡಿಗೆ ತಾಯಿ ಆಗಬಯಸುವಿರಾ?' ಎಂದು ಕೇಳಿದರು. ರಾಜಕುಮಾರ್ ಮದುವೆಯಾಗಿ ಅನೇಕ ವರ್ಷ ಕಳೆದಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ.
ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ ಸದರಿ ಮಹಿಳೆ 2 ಲಕ್ಷ ರುಪಾಯಿಯ ಒಪ್ಪಂದವೊಂದಕ್ಕೆ ಸಹಿ ಹಾಕುತ್ತಾರೆ. ಮುಂಗಡವಾಗಿ ಗ್ರಾಹಕ ರಾಜಕುಮಾರ್ 40 ಸಾವಿರ ರುಪಾಯಿ ಹಣವನ್ನು ನೀಡಿದ್ದ. ಆ ಮಹಾತಾಯಿಯು 2011ರ ಅಕ್ಟೋಬರ್ 11ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ ಖದೀಮ ರಾಜಕುಮಾರ ಹೊಳೆ ದಾಟಿದ ಮೇಲೆ ಅಂಬಿಗನನ್ನು ಮರೆತಂತೆ ಸದರಿ ಮಹಿಳೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಆಕೆಗೆ ನೀಡಿದ್ದ ವಾಗ್ದಾದನದಂತೆ ಉಳಿದ 1.6 ಲಕ್ಷ ರುಪಾಯಿ ಹಣ ನೀಡಲೇ ಇಲ್ಲ.
ಈ ಬಗ್ಗೆ ಇಬ್ಬರ ನಡುವೆ ಅನೇಕ ಸಲ ಜಗಳಗಳು ನಡೆದಿವೆ. ಸದರಿ ಮಹಿಳೆ ಬಾಕಿ ಹಣವನ್ನು ನೀಡುವಂತೆ ರಾಜಕುಮಾರನನ್ನು ಕೇಳುತ್ತಲೇ ಇದ್ದರು. ಆದರೆ ಇದಕ್ಕೊಂದು ಅಂತ್ಯ ಕಾಣಿಸಬೇಕೆಂದು ಪೂರ್ವಾಲೋಚನೆ ಮಾಡಿದ ರಾಜಕುಮಾರ, ಕಳೆದ ಭಾನುವಾರ ಅಹಮದಾಬಾದಿಗೆ ಭೇಟಿ ನೀಡಿ, ಆಕೆಯನ್ನು ಸಂಧಿಸಿದ್ದಾನೆ. ಉಳಿದ ಹಣ ಕೊಡುತ್ತೇನೆ ಎಂದು ಪುಸಲಾಯಿಸುತ್ತಾ ಮಾತನಾಡಿದ್ದಾನೆ.
ಇದನ್ನು ನಂಬಿದ ಮಹಿಳೆಯು ರಾಜಕುಮಾರನ ಸಂಗಡ ನಾಡಿಯಾಡ್ ಗೆ ತೆರಳಿದ್ದಾಳೆ. ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದ ರಾಜಕುಮಾರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದುರ್ದೈವವೆಂದರೆ ಇದೇ ವೇಳೆ ಆ ಮಹಿಳೆಯು ಮತ್ತೊಬ್ಬ ಮಕ್ಕಳಿಲ್ಲದ ದಂಪತಿಗೆ ತಾಯಿಯಾಗಲು, ಫಲ ಹೊತ್ತಿದ್ದಳು.












Click it and Unblock the Notifications