ರಘುಪತಿ ಭಟ್ ಮೇಲೆ ಭೂ ಹಗರಣ ಭೂತ ಬಿಟ್ಟ ಕಾಂಗ್ರೆಸ್

ಪಡುಬಿದ್ರೆ ಬಳಿ ಕೆಐಎಡಿಬಿ ಭೂಸ್ವಾಧೀನ ಮಾಡಿದ ಸುಮಾರು 110 ಎಕರೆಯಲ್ಲಿ 44 ಎಕರೆಯಷ್ಟು ಜಮೀನನ್ನು ಉಡುಪಿಯ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಡಿನೋಟಿಫಿಕೇಶನ್ ಮಾಡಿಸಿ, ನಂತರ ಈ ಜಾಗವನ್ನು ರೈತರ ಮುಖಾಂತರ ತನ್ನ ಸ್ನೇಹಿತ ಮುಂಬೈ ಉದ್ಯಮಿಗೆ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪ ಹೊರೆಸಿದೆ.
ಉಡುಪಿಯಲ್ಲಿ ಮಂಗಳವಾರ(ಜು.10) ಸುದ್ದಿಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್, ರಾಜ್ಯ ಸರ್ಕಾರ 2002ರಲ್ಲಿ ಕೆಐಎಡಿಬಿ ಮೂಲಕ ಪಡುಬಿದ್ರೆಯ ಬಳಿಯ ನಂದಿಕೂರು ಗ್ರಾಮದಲ್ಲಿ 110.61 ಎಕರೆ ಪ್ರದೇಶವನ್ನು ಸಣ್ಣ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡಿತ್ತು.
ಈ ಪ್ರದೇಶ ನಂದಿಕೂರಿನಲ್ಲಿ ಸ್ಥಾಪಿಸಲ್ಪಟ್ಟ ಕೆಪಿಟಿಸಿಎಲ್ ಸಬ್‌ಸ್ಟೇಶನ್ ಬಳಿ ಅಂದರೆ ಪಡುಬಿದ್ರೆ-ಕಾರ್ಕಳ ರಸ್ತೆಯ ಎರಡೂ ಬದಿಯಲ್ಲಿ ರಸ್ತೆಗೆ ತಾಗಿಕೊಂಡೇ ಇದೆ. ಕೆಐಎಡಿಬಿಯು ಗೆಜೆಟ್ ನೋಟಿಫಿಕೇಷನ್ ಮೂಲಕ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿ ಉಡುಪಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 2008-09ರಲ್ಲಿ ಭೂ ಮಾಲೀಕರೊಂದಿಗೆ ಚರ್ಚಿಸಿ ದರ ನಿಗದಿಪಡಿಸಲಾಗಿತ್ತು ಎಂದು ವಿವರಿಸಿದರು.
ನಂದಿಕೂರು ಗ್ರಾಮ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದಾದರೂ, ಶಾಸಕ ರಘುಪತಿ ಭಟ್ 2009ರ ಅಕ್ಟೋಬರ್ ತಿಂಗಳಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಗೆ ಪತ್ರ ಬರೆದು ನಂದಿಕೂರು ಗ್ರಾಮದಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ 110 ಎಕರೆ ಪ್ರದೇಶದಲ್ಲಿ 50 ಎಕರೆ ಕೃಷಿ ಭೂಮಿಯನ್ನು ರೈತರಿಗಾಗಿ ಡಿನೋಟಿಫೈ ಮಾಡಬೇಕೆಂದು ಕೋರಿದ್ದರು ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ನಂದಿಕೂರು ಸಬ್ ಸ್ಟೇಶನ್ ಬಳಿಯ ರಾಜ್ಯ ಹೆದ್ದಾರಿಗೆ ತಾಗಿ ಇರುವ 44 ಎಕರೆ ಪ್ರದೇಶವನ್ನು ಡಿನೋಟಿಫಿಕೇಶನ್ ಮಾಡಲಾ ಯಿತು. ಕೆಐಎಡಿಬಿ ಉಳಿದ ಜಮೀನಿನಲ್ಲಿ ಈಗ ಸಣ್ಣ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಮುಂದಾಗಿದ್ದು, ಕಾಮಗಾರಿಯನ್ನು ಆರಂಭಿಸಿದೆ ಎಂದು ಭಂಡಾರ್ಕರ್ ತಿಳಿಸಿದರು.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪಟ್ಟ ಜಾಗಕ್ಕೆ ಉಡುಪಿ ಕ್ಷೇತ್ರದ ಶಾಸಕರು ತನ್ನ ಮಿತ್ರನ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಉದ್ದೇಶ ದಿಂದಲೇ ಈ ಜಾಗವನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಈ 50 ಎಕರೆ ಪ್ರದೇಶದಲ್ಲಿ ದೇವಸ್ಥಾನ, ನಾಗಬನ, ಗುಡಿಗಳಿದೆ. ಇದು ಕೃಷಿ ಪ್ರದೇಶವಾಗಿರುವುದರಿಂದ ಪರಿಸರದ ಸಮತೋಲನಕ್ಕಾಗಿ ಅದನ್ನು ಭೂ ಮಾಲೀಕರಿಗೆ ಮರಳಿಸಬೇಕು ಎಂದು ಮನವಿ ಮಾಡಿದ್ದ ಶಾಸಕರು ಅದನ್ನೀಗ ತನ್ನ ಸ್ನೇಹಿತನಿಗೆ ಪರಭಾರೆ ಮಾಡಲು ಮುಂದಾಗಿದ್ದಾರೆ ಎಂದು ಅವರು ದೂರಿದರು.
ಈ ಪ್ರದೇಶದಲ್ಲಿ ಈಗ ಎಕರೆಗೆ ಸುಮಾರು ಒಂದು ಕೋಟಿ ರೂ. ವೌಲ್ಯವಿದ್ದು, ಶಾಸಕರು ಸುಮಾರು 44 ಕೋಟಿ ರೂ. ವೌಲ್ಯದ ಜಾಗವನ್ನು ಮುಂಬೈಯ ಉದ್ಯಮಿ ಮಿತ್ರನಿಗೆ ಐದು ಕೋಟಿ ರೂ.ಗೆ ಸಿಗುವಂತೆ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಜಾಗದ ಆರ್‌ಟಿಸಿ ಬದಲಾವಣೆ, ಕನ್ವರ್ಷನ್ ಹಾಗೂ ಇನ್ನಿತರ ರೆಕಾರ್ಡ್ ವಿಲೇವಾರಿ ಕೆಲಸ ತಾಲೂಕು ಕಚೇರಿಯಲ್ಲಿ ನಡೆಯುತ್ತಿದೆ. ಇದಕ್ಕೆ ಬದಲಾಗಿ ಶಾಸಕರ ಟ್ರಸ್ಟ್‌ಗಳಿಗೆ ಮುಂಬೈ ಉದ್ಯಮಿ ಬೃಹತ್ ಮೊತ್ತದ ಡೊನೇಷನ್ ನೀಡುವ ಮಾಹಿತಿ ಇದೆ ಎಂದು ಹೇಳಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್ ಈ ಬಗ್ಗೆಗಿನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದರೆ ನಾವೇ ಲೋಕಾಯುಕ್ತಕ್ಕೆ ಎಲ್ಲಾ ದಾಖಲೆಗಳನ್ನು ನೀಡಿ ತನಿಖೆ ಕ್ರಮ ಕೈಗೊಳ್ಳುತ್ತೇವೆ ಎಂದು ಭಂಡಾರ್ಕರ್ ಎಚ್ಚರಿಕೆ ನೀಡಿದರು.












Click it and Unblock the Notifications